ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ…

50
firstsuddi

ಬೆಂಗಳೂರು: ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬಿಡುಗಡೆ ಮಾಡಿದರು.

‘ಸರ್ವ ಜನಾಂಗದ ಶಾಂತಿಯ ತೋಟ,ಇದುವೆ ಕಾಂಗ್ರೆಸ್ ಬದ್ದತೆ’ ಹೆಸರಿನಲ್ಲಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಕಾಂಗ್ರೆಸ್ ಬರಲಿದೆ ಪ್ರಗತಿ ತರಲಿದೆ ಎಂದು ಘೋಷ ವಾಕ್ಯವನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ.

ಕಾರ್ಯಕ್ರಮದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್, ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಸೇರಿ ಹಲವರು ಭಾಗಿಯಾಗಿದ್ದರು.

ಪ್ರಣಾಳಿಕೆಯಲ್ಲಿ ಏನಿದೆ?:
• ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ಉಚಿತ ವಿದ್ಯುತ್, ಅನ್ನ ಭಾಗ್ಯ ಯೋಜನೆಯಡಿ ಪ್ರತಿ ವ್ಯಕ್ತಿಗೆ 10 ಕೆಜಿ ಉಚಿತ ಅಕ್ಕಿ, ಗೃಹಲಕ್ಷ್ಮೀ ಯೋಜನೆಯಡಿ ಮನೆ ಯಜಮಾನಿಗೆ 2 ಸಾವಿರ ರೂ, ಯುವನಿಧಿ ಯೋಜನೆಯಡಿ ನಿರುದ್ಯೋಗ ಯುವಕರಿಗೆ ನೆರವು, ಪದವೀಧರರಿಗೆ 3 ಸಾವಿರ ರೂ., ಡಿಪ್ಲೊಮೊ ಪದವೀಧರರಿಗೆ 1,500 ರೂ. ಜೊತೆಗೆ ಎಲ್ಲಾ ಮಹಿಳೆಯರಿಗೆ ಸರ್ಕಾರಿ ಬಸ್‍ನಲ್ಲಿ ಉಚಿತ ಪ್ರಯಾಣ ಮಾಡಲಾಗುವುದು.

• ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ರದ್ದು.

• ಅಂಗನವಾಡಿ ಕಾರ್ಯಕರ್ತೆಯರ ವೇತನ 11,500ರಿಂದ 15 ಸಾವಿರಕ್ಕೆ ಹೆಚ್ಚಳ, ಆಶಾ ಕಾರ್ಯಕರ್ತೆಯರ ಗೌರವಧನ 8 ಸಾವಿರ ರೂ.ಗೆ ಹೆಚ್ಚಳ, ಬಿಸಿಯೂಟ ನೌಕರರ ಮಾಸಿಕ ಗೌರವಧನ 6 ಸಾವಿರ ರೂ.ಗೆ ಹೆಚ್ಚಳ.

• ಪಿಯುಸಿಯಿಂದ ಪಿಜಿವರೆಗೂ ವಿದ್ಯಾರ್ಥಿನಿಯರಿಗೆ ಉಚಿತ ಲ್ಯಾಪ್ ಟಾಪ್, ಡಿಜಿಟಲ್ ನೋಟ್ ಪ್ಯಾಡ್ ಉಚಿತವಾಗಿ ನೀಡಲಾಗುವುದು.

• ರಾತ್ರಿ ಪಾಳಿಯ ಪೊಲೀಸ್ ಸಿಬ್ಬಂದಿಗೆ 5 ಸಾವಿರ ರೂ. ವಿಶೇಷ ಭತ್ಯೆ, ಎಲ್ಲಾ ಪೊಲೀಸರಿಗೆ ವರ್ಷಕ್ಕೆ ಒಂದು ತಿಂಗಳ ವೇತನ ಹೆಚ್ಚುವರಿ ಪಾವತಿ, ಆದ್ಯತೆಯ ಮೇರೆಗೆ ಕಾಲ ಕಾಲಕ್ಕೆ ಎಲ್ಲಾ ಖಾಲಿ ಹುದ್ದೆಗಳ ಭರ್ತಿ.

• ನಾಲ್ಕು ವರ್ಷದೊಳಗೆ ಎಲ್ಲಾ ಪೊಲೀಸ್ ಸಿಬ್ಬಂದಿಗೂ ವಸತಿ ಸೌಲಭ್ಯ, ಪ್ರತಿ ಜಿಲ್ಲೆಯಲ್ಲೂ ಸುಸಜ್ಜಿತ ಸೈಬರ್ ಪೊಲೀಸ್ ಠಾಣೆಗಳ ನಿರ್ಮಾಣ, ಕನಕಪುರದಲ್ಲಿ ವಿಶ್ವದರ್ಜೆಯ ವಿಧಿವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವ ಭರವಸೆಯನ್ನು ಕಾಂಗ್ರೆಸ್ ನೀಡಿದೆ.

• ಬಿಬಿಎಂಪಿ ನಿರ್ವಹಣೆಗಾಗಿಯೇ ಸಮಗ್ರ ಶಾಸನ ಜಾರಿ, ಒಂದೇ ವೇದಿಕೆ ಅಡಿ ಸಾರಿಗೆ ವಿದ್ಯುತ್ ವಸತಿ ಒಳಚರಂಡಿ, ನೀರು ಸರಬರಾಜು ಸೌಕರ್ಯ, ಬೆಂಗಳೂರು ನಗರದ ವಿವಿಧ ಪ್ರದೇಶಗಳಿಗೆ ರಾತ್ರಿ 1 ಗಂಟೆ ತನಕ ಬಸ್ ವ್ಯವಸ್ಥೆ.

• ಸರ್ಕಾರದಿಂದಲೇ ಮನೆಗಳ ನಿರ್ಮಾಣ, ಮಂಗಳಮುಖಿಯರಿಗಾಗಿ ಮಂಡಳಿ ಸ್ಥಾಪನೆ (100 ಕೋಟಿ ಅನುದಾನ), ಆಟೋ ಚಾಲಕರ ಮಂಡಳಿ ಹಾಗೂ ಟ್ಯಾಕ್ಸಿ ಚಾಲಕರ ಮಂಡಳಿ ಸ್ಥಾಪನೆ, ಪತ್ರಕರ್ತರ ಕಲ್ಯಾಣ ನಿಧಿಗೆ 500 ಕೋಟಿ ರೂ ಮೀಸಲು (ಪತ್ರಕರ್ತರಿಗೆ ಸಾಮಾಜಿಕ ಭದ್ರತಾ ಯೋಜನೆ ಜಾರಿ, ಮೊದಲ ಅಧಿವೇಶನದಲ್ಲಿ ಸದಾಶಿವ ಆಯೋಗದ ವರದಿ ಮಂಡನೆ), ಎಸ್‍ಸಿ-ಎಸ್‍ಟಿ ಒಳ ಮೀಸಲಾತಿಗೆ ನ್ಯಾಯ ಕೊಡಿಸಲು ಕಾಂಗ್ರೆಸ್ ಬದ್ದ.

• ಒಂದು ಬಾರಿಯ ನೆರವಿನ ರೂಪದಲ್ಲಿ ಬೀದಿ ವ್ಯಾಪಾರಿಗಳಿಗೆ 20 ಸಾವಿರ ಅನುದಾನ, ಹಿರಿಯ ನಾಗರಿಕರಿಗೆ ಎರಡು ವರ್ಷಕ್ಕೊಮ್ಮೆ ರಾಜ್ಯದ 15 ದೇಶದ 10 ಪವಿತ್ರ ಸ್ಥಳಗಳಿಗೆ ಉಚಿತ ಪ್ರವಾಸ, ಕಾಶಿ, ಮಥುರ, ಕೈಲಾಸ, ಮಾನಸ ಸರೋವರ ಯಾತ್ರೆಯ ಸಬ್ಸಿಡಿ ಹೆಚ್ಚಳ.

• ವಿಶೇಷ ಚೇತನರಿಗೆ ಪ್ರತಿ ಜಿಲ್ಲೆಯಲ್ಲಿ ವಿಶೇಷ ಶಾಲೆ ಸ್ಥಾಪನೆ, ಅಂಗವಿಕಲ ಮಹಿಳೆಯರಿಗೆ ಸ್ವ ಉದ್ಯೋಗಕ್ಕೆ 3 ಲಕ್ಷದವರೆಗೂ ಬಡ್ಡಿ ರಹಿತ ಸಾಲ.

• ದುಡಿಯುವ ಮಹಿಳೆಯರಿಗಾಗಿ 100 ಹಾಸ್ಟಲ್ ನಿರ್ಮಾಣ ಮಾಡಲಾಗುವುದು. ನಿರ್ಭಯ ವಾಹಿನಿ ಯೋಜನೆ ಮೂಲಕ ಹೈಸ್ಕೂಲ್, ಪಿಯುಸಿ ಬಿಟ್ಟವರಿಗೆ ಉಚಿತ ವಾಹನ ತರಬೇತಿ ಹಾಗೂ ಸಬ್ಸಿಡಿಯಲ್ಲಿ ಆಟೋ ಮತ್ತು ಕಾರ್ ನೀಡಲಾಗುತ್ತದೆ.

• ಫೀಲ್ಡ್ ಮಾರ್ಷಲ್ ಕಾರ್ಯಪ್ಪ ನಿವೃತ್ತಿ ಸೈನಿಕ ಅಭಿವೃದ್ಧಿ ನಿಗಮ ಸ್ಥಾಪನೆ ಹಾಗೂ ವಾರ್ಷಿಕ 250 ಕೋಟಿ ಅನುದಾನ ನೀಡಲಾಗುವುದು. ಸ್ವ ಉದ್ಯೋಗಕ್ಕಾಗಿ ಶೇ 5% ಬಡ್ಡಿಯಲ್ಲಿ 10 ಲಕ್ಷದವರೆಗೆ ಸಾಲ ನೀಡಲಾಗುವುದು.