ಬೆಳಗಾವಿ : ಕಾಂಗ್ರೆಸ್ ಯುವ ನಾಯಕಿ ಚನ್ನಪಟ್ಟಣ ಮೂಲದ ನವ್ಯಶ್ರೀ ರಾಮಚಂದ್ರರಾವ್ ವಿರುದ್ಧ ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಬೆಳಗಾವಿ ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಕುಮಾರ್ ಟಾಕಳೆ ಎಂಬುವವರು ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ನವ್ಯಾ ಶ್ರೀ ಆರ್.ರಾವ್ ಹಾಗೂ ಆಪ್ತ ತಿಲಕ್ ವಿರುದ್ಧ ತಡರಾತ್ರಿಯೇ ದೂರು ನೀಡಿದ್ದು, ನವ್ಯಶ್ರೀ ನನಗೆ ಮಾನಸಿಕ ಚಿತ್ರಹಿಂಸೆ ನೀಡುತ್ತಿದ್ದಾರೆ, ಸುಳ್ಳು ಕೇಸ್ ನೀಡಿ ಮಾನಹಾನಿ ಮಾಡಿ ಜೈಲಿಗೆ ಕಳುಹಿಸುವುದಾಗಿ ಹೆದರಿಸುತ್ತಿದ್ದಾರೆ. ಜೊತೆಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ. ಅವರಿಂದ ನನಗೆ ಮತ್ತು ನನ್ನ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
ಸದ್ಯ ರಾಜಕುಮಾರ ಟಾಕಳೆ ನೀಡಿದ ದೂರಿನ ಮೇರೆಗೆ ನವ್ಯಶ್ರೀ ವಿರುದ್ಧ ಐಪಿಸಿ ಸೆಕ್ಷನ್ 384, 448, 504, 506, 34ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತ ರಾಜಕುಮಾರ ಅವರೇ ನನ್ನ ಗಂಡ ಎಂದು ನವ್ಯಶ್ರೀ ಹೇಳುತ್ತಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ರಾಜಕುಮಾರ ಟಾಕಳೆ ನನ್ನ ಗಂಡ, ಅವನಿಂದ ನನಗೆ ಏನು ಮೋಸ ಆಗಿದೆ ಅನ್ನೋದನ್ನ ಮುಂದಿನ ದಿನಗಳಲ್ಲಿ ಹೇಳುತ್ತೇನೆ. ನಾನು 15 ದಿನಗಳಿಂದ ಭಾರತದಲ್ಲಿ ಇರಲಿಲ್ಲ. ನನ್ನ ಮೇಲೆ ಎಫ್ ಐಆರ್ ದಾಖಲಾಗಿರುವ ಬಗ್ಗೆ ಮಾಹಿತಿಯಿಲ್ಲ. ಈವರೆಗೂ ಯಾವುದೇ ಪೊಲೀಸರು ನನಗೆ ಫೋನ್ ಮಾಡಿಲ್ಲ. ಎಫ್ ಐಆರ್ ಕಾಪಿ ಪಡೆದು ಮಾತಾಡುತ್ತೇನೆ. ಸಾಮಾಜಿಕ ಜಾಲತಾಣದಲ್ಲಿ ನನ್ನ ಫೋಟೋ, ವಿಡಿಯೋ ವೈರಲ್ ಆಗಿರುವುದು ಗೊತ್ತಾಗಿದೆ. ಈ ಬಗ್ಗೆ ನಾನು ಬೆಳಗಾವಿ ಪೊಲೀಸ್ ಕಮಿಷನರ್ ಭೇಟಿಯಾಗಿ ದೂರು ಕೊಡುತ್ತೇನೆ ಎಂದರು.










