ಕೊಯಮತ್ತೂರು: ಪೆಟ್ರೋಲ್ ಟ್ಯಾಂಕರ್ ಟ್ರಕ್- ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿರುವ ಘಟನೆ ನಿನ್ನೆ ತಡರಾತ್ರಿ ತಮಿಳುನಾಡಿನ ತಿರುಪ್ಪುರ ಜಿಲ್ಲೆಯ ಧಾರಾಪುರಂ-ಪಳನಿ ರಸ್ತೆಯಲ್ಲಿ ನಡೆದಿದೆ.
ಮೃತರನ್ನು ತಮಿಳುಮಣಿ (51), ಚಿತ್ರಾ (49), ಸೆಲ್ವರಾಣಿ (70), ಬಾಲಕೃಷ್ಣನ್ (78), ಮತ್ತು ಕಲಾರಾಣಿ (50) ಎಂದು ಗುರುತಿಸಲಾಗಿದೆ. ಇವರೆಲ್ಲರೂ ದಿಂಡಿಗಲ್ ಜಿಲ್ಲೆಯ ಪಳನಿಯಲ್ಲಿ ನಡೆದ ಮದುವೆ ಕಾರ್ಯಕ್ರಮ ಮುಗಿಸಿ ಕಾರಿನಲ್ಲಿ ವಾಪಸ್ ಆಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಮಿಳುಮಣಿ, ಚಿತ್ರಾ, ಬಾಲಕೃಷ್ಣನ್ ಮತ್ತು ಸೆಲ್ವರಾಣಿ ಸ್ಥಳದಲ್ಲೇ ಮೃತಪಟ್ಟರೆ, ಕಲಾರಾಣಿ ಅವರನ್ನು ಧಾರಾಪುರಂ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಘಟನೆ ಸಂಬಂಧ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.










