ಬೆಂಗಳೂರು: ಕಾರಿಗೆ ಬೈಕ್ ಟಚ್ ಆಗಿದ್ದಕ್ಕೆ ಆರಂಭವಾದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ವಿದ್ಯಾರಣ್ಯಪುರದಲ್ಲಿ ನಡೆದಿದೆ.
ಮಹೇಶ್ (21) ಹತ್ಯೆಯಾದ ಯುವಕ. ಕೊಲೆಯಾದ ಮಹೇಶ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದ. ನಿನ್ನೆ ರಾತ್ರಿ ಸುಮಾರು 7 ಗಂಟೆ ಸಮಯದಲ್ಲಿ ಗೆಳೆಯರಾದ ಬಾಲಾಜಿ ಮತ್ತು ನಿಖಿಲ್ ಜೊತೆ ಟೀ ಕುಡಿಯಲು ಹೋಗಿದ್ದ. ಟೀ ಕುಡಿದು ಬೈಕ್ ನಲ್ಲಿ ಬರುವಾಗ ಸ್ಪೀಡಾಗಿ ಬಂದ ಕಾರು ಹಾರ್ನ್ ಮಾಡಿದರೂ ಸೈಡ್ ಕೊಟ್ಟಿಲ್ಲ. ಈ ವೇಳೆ ಕಾರಿಗೆ ಬೈಕ್ ಸ್ವಲ್ಪ ಟಚ್ ಆಗಿದ್ದಕ್ಕೆ ಕಾರಿನಲ್ಲಿದ್ದ ಅರವಿಂದ್ ಹಾಗೂ ಕೇಶವ್ ಎಂಬವರು ಗಲಾಟೆ ಮಾಡಿದ್ದಾರೆ.
ಗಲಾಟೆ ಬಳಿಕ ಮಹೇಶ್ ಬೈಕ್ ನಲ್ಲಿ ಹೋಗುವಾಗ ಕಾರಿನಲ್ಲಿ ಕಿಲೋಮೀಟರ್‌ಗಟ್ಟಲೆ ಚೇಸ್ ಮಾಡಿ ಆರೋಪಿಗಳು ಬೈಕ್ ಗೆ ಹಿಂದಿನಿಂದ ಅಪಘಾತವೆಸಗಿದ್ದಾರೆ. ಪರಿಣಾಮ ಬೈಕ್ ನಲ್ಲಿದ್ದ ಮಹೇಶ್ ತಲೆ ರಸ್ತೆಯಲ್ಲಿದ್ದ ಪೋಲ್ ಹಾಗೂ ಗೋಡೆಗೆ ಬಡಿದಿದೆ. ಹೆಲ್ಮೆಟ್ ಹಾಕಿರದ ಕಾರಣ ಮೆದಳು ಹೊರಗಡೆ ಬಂದಿದ್ದು, ಸ್ಥಳದಲ್ಲೇ ಆತ ಮೃತಪಟ್ಟಿದ್ದಾನೆ. ಇನ್ನು, ಅಪಘಾತದ ನಂತರ ಗಾಯಗೊಂಡಿದ್ದ ಮಹೇಶ್‌ನನ್ನು ಹೊತ್ತೊಯ್ಯಲು ಕಾರು ಚಾಲಕ ಮುಂದಾಗಿದ್ದಾನೆ. ಆದರೆ, ರಕ್ತದ ಮಡುವಿನಲ್ಲಿದ್ದ ಮಹೇಶ್ ಸಾವನ್ನಪ್ಪಿದ್ದಾನೆ.
ಈ ಕುರಿತು ವಿದ್ಯಾರಣ್ಯಪುರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು, ಅರವಿಂದ್ ಹಾಗೂ ಕೇಶವ್‍ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.










