ಕಾರು ಅಪಘಾತ- ಮೈಸೂರು ಬಿಜೆಪಿ ಮುಖಂಡ ಸ್ಥಳದಲ್ಲೇ ಸಾವು…

74
firstsuddi

ಮೈಸೂರು: ಕಾರು ಅಪಘಾತದಲ್ಲಿ ಮೈಸೂರಿನ ಬಿಜೆಪಿ ಮುಖಂಡರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಿನ್ನೆ ತಮಿಳುನಾಡಿನ ಊಟಿ ಬಳಿ ನಡೆದಿದೆ.

ಮೃತ ವ್ಯಕ್ತಿ ಮೈಸೂರು ನಗರದ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸ್ವಾಮಿಗೌಡ ಎಂದು ಗುರುತಿಸಲಾಗಿದೆ. ಬುಧವಾರದಂದು ಸ್ವಾಮಿಗೌಡ ಅವರು ತಮ್ಮ ಸ್ನೇಹಿತ ಜಗದೀಶ ಗೌಡ ಅವರ ಕುಟುಂಬದ ಜೊತೆ ತಮಿಳುನಾಡಿನ ಊಟಿ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ದುರಂತ ನಡೆದಿದ್ದು, ಸ್ವಾಮಿಗೌಡ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಬ್ಬರು ಮಕ್ಕಳು ಸೇರಿ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರಿನಲ್ಲಿ ಸ್ವಾಮಿಗೌಡ, ಜಗದೀಶ್ ಗೌಡ, ಆತನ ಪತ್ನಿ ಮತ್ತು ಇಬ್ಬರು ಮಕ್ಕಳು ಪ್ರಯಾಣಿಸುತ್ತಿದ್ದರು. ಊಟಿ ಪ್ರವಾಸ ಮುಗಿಸಿಕೊಂಡು ಮೈಸೂರಿಗೆ ತೆರಳುತ್ತಿದ್ದ ವೇಳೆ ಕೂಡ್ಲೂರು ಬಳಿ ಇವರು ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಸ್ವಾಮಿಗೌಡ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಸ್ವಾಮಿಗೌಡ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.