ಶಿವಮೊಗ್ಗ : ಆಜಾದ್ ನಗರದಲ್ಲಿ ಕಾರನ್ನು ಜಖಂಗೊಳಿಸಿದ ಆರೋಪದ ಮೇಲೆ ಕೊಲೆಯಾದ ಹರ್ಷ ಸಹೋದರಿ ಅಶ್ವಿನಿ ಸೇರಿದಂತೆ ಒಟ್ಟು 15 ಮಂದಿ ವಿರುದ್ಧ ಜಿಲ್ಲೆಯ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಅಕ್ಟೋಬರ್ 22 ರಂದು ಸಂಜೆ ಸಾವರ್ಕರ್ ಸಾಮ್ರಾಜ್ಯ ಕಾರ್ಯಕ್ರಮದ ಪ್ರಯುಕ್ತ ಬೈಕ್ ಜಾಥ ಆಯೋಜಿಸಲಾಗಿತ್ತು. ಅದರಂತೆ ನಗರದ ಅಮೀರ್ ಅಹ್ಮದ್ ವೃತ್ತದಿಂದ ಬೈಕ್ ಜಾಥಾ ನಡೆದಿದ್ದು, ಕಲ್ಲಪ್ಪನ ಕೇರಿಯಿಂದ ಬೈಕ್ ಗಳಲ್ಲಿ ಗುಂಪಾಗಿ ಕಾರ್ಯಕರ್ತರು ತೆರಳಿದ್ದಾರೆ. ಈ ಜಾಥಾದಲ್ಲಿ ಹರ್ಷ ಸಹೋದರಿ ಅಶ್ವಿನಿ ಕೂಡ ಭಾಗಿಯಾಗಿದ್ದರು.
ಜಾಥಾ ಸಾಗುತ್ತಿದ್ದಾಗ ಆಜಾದ್ ನಗರದಲ್ಲಿ ಸಯ್ಯದ್ ಫರ್ವೀಜ್ ಎಂಬವರಿಗೆ ಸೇರಿದ್ದ ಇನ್ನೋವಾ ಕಾರನ್ನು ಜಖಂ ಮಾಡಿದ್ದಾರೆ. ಈ ವೇಳೆ ಕಾರಿನ ಎಡಭಾಗದ ಹೆಡ್ ಲೈಟ್, ಸೈಡ್ ಡೋರ್, ಬ್ಯಾಕ್ ಸೈಡ್ ಮಡ್ ಗಾರ್ಡ್ ಹಾನಿಯಾಗಿದೆ. ಈ ಬಗ್ಗೆ ಕಾರು ಮಾಲೀಕ ಸೈಯದ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ.










