ಕಾವೇರಿ ಕಿಚ್ಚು-ಕರುನಾಡು ಬಂದ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ…

68
firstsuddi

ಮಂಗಳೂರು: ಕರ್ನಾಟಕದ ದಕ್ಷಿಣ ಭಾಗದ ಜಿಲ್ಲೆಗಳ ಜನರ ಜೀವನಾಡಿ ಕಾವೇರಿ ನೀರನ್ನು ರಾಜ್ಯದಲ್ಲಿ ತೀವ್ರ ಬರಗಾಲದ ಮಧ್ಯೆ ತಮಿಳು ನಾಡಿಗೆ ಹರಿಸುವುದನ್ನು ವಿರೋಧಿಸಿ ಇಂದು ಕನ್ನಡಪರ ಸಂಘಟನೆಗಳು ಬಂದ್ ನಡೆಸುತ್ತಿವೆ. ಆದರೆ ಕರಾವಳಿ ಭಾಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮಂಗಳೂರಿನಲ್ಲಿ ಎಲ್ಲಾ ಹೋಟೆಲ್, ಪೆಟ್ರೋಲ್ ಬಂಕ್‌ಗಳು ತೆರೆದಿದ್ದು, ಎಲ್ಲಾ ಉದ್ಯಮಗಳೂ ಎಂದಿನಂತೆ ನಡೆಯುತ್ತಿವೆ. ಕರ್ನಾಟಕ ಬಂದ್ ಇದ್ದರೂ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿಲ್ಲ. ಸರ್ಕಾರಿ ಕಚೇರಿಗಳು ಕೂಡಾ ಎಂದಿನಂತೆ ನಿರ್ವಹಿಸುತ್ತಿವೆ. ಜನರ ನಿತ್ಯದ ವಹಿವಾಟುಗಳು ಮುಂಜಾನೆಯಿಂದಲೇ ಆರಂಭವಾಗಿವೆ.

ಇಂದು ಬೆಳಗ್ಗೆ 6ರಿಂದ ಸಂಜೆ 6ಗಂಟೆವರೆಗೆ ಬಂದ್‌ಗೆ ಕರೆ ನೀಡಿದ್ದು, ರಾಜ್ಯಾದ್ಯಂತ 1,600ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಸೂಚಿಸಿವೆ. ಬಿಜೆಪಿ-ಜೆಡಿಎಸ್ ಕೂಡಾ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ.

ಸಿಎಂ ವಿವಾಸ ಬಳಿ ಬಿಗಿ ಭದ್ರತೆ:
ಪ್ರತಿಭಟನಾಕಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಸಿಎಂ ನಿವಾಸಕ್ಕೆ ಸಂಪರ್ಕ ಕಲ್ಪಿಸುವ ದಾರಿಗಳಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಸಂಜಯ್ ನಗರ ಸರ್ಕಲ್, ಆನಂದ್ ರಾವ್ ಸರ್ಕಲ್, ಆರ್.ಟಿ ನಗರದ ತರಳುಬಾಳು ಜಂಕ್ಷನ್ ಸೇರಿದಂತೆ ಐದಾರು ಕಡೆ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಸಿಎಂ ಗೃಹ ಕಚೇರಿ ಕೃಷ್ಣಾ ಬಳಿ ಎರಡು ಕೆಎಸ್ ಆರ್​​​ಪಿ, ಕಾವೇರಿ ನಿವಾಸದ ಬಳಿ ಒಂದು ಬಿಎಂಟಿಸಿ ಬಸ್, ಒಂದು ಕೆಎಸ್ ಆರ್​​​ಪಿ ತುಕಡಿ ನಿಯೋಜಿಸಲಾಗಿದೆ.