ಕುಡಿದ ಮತ್ತಿನಲ್ಲಿ ಮಕ್ಕಳ ಮೇಲೆ ಮಾರಣಾಂತಿಕ ಹಲ್ಲೆ – ಶಾಲಾ ನಿರ್ದೇಶಕನ ವಿರುದ್ಧ ಕೇಸ್ ದಾಖಲು…

103
firstsuddi

ತುಮಕೂರು : ಕುಡಿದ ಮತ್ತಿನಲ್ಲಿ ಶಾಲಾ ವಿದ್ಯಾರ್ಥಿಗಳ ಮೇಲೆ ಶಾಲೆಯ ಆಡಳಿತ ಮಂಡಳಿ ನಿರ್ದೇಶಕ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಮಲ್ಲಸಂದ್ರದ ವಿಶ್ವಭಾರತಿ ವಸತಿ ಶಾಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಆರೋಪಿಯನ್ನು ಶಾಲೆಯ ಕಾರ್ಯದರ್ಶಿ ಎನ್ ಮೂರ್ತಿಯ ಮಗ ಮತ್ತು ನಿರ್ದೇಶಕ ಭರತ್ ಎಂದು ಗುರುತಿಸಲಾಗಿದೆ. ನಾಲ್ಕು ದಿನಗಳ ಹಿಂದೆ ಈ ಘಟನೆ ನಡೆದಿದೆ. ಆದರೆ ಮಕ್ಕಳಿಗೆ ಚಿಕಿತ್ಸೆಯನ್ನೂ ಕೊಡಿಸದ ಆಡಳಿತ ಮಂಡಳಿಯು ಹಲ್ಲೆಯ ವಿಚಾರವನ್ನೇ ಮುಚ್ಚಿಟ್ಟಿತ್ತು ಎಂದು ದೂರಲಾಗಿದೆ.

ಕುಡಿದ ಮತ್ತಿನಲ್ಲಿ ಬಂದ ಭರತ್ ಮಕ್ಕಳು ಬೇಗ ಮಲಗಿದ್ದಾರೆಂದು ಸುಮಾರು 30ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಬೆಲ್ಟ್ ಮತ್ತು ದೊಣ್ಣೆಯಿಂದ ಹಲ್ಲೆ ನಡೆಸಿದ್ದಾನೆ. ನ.21ರ ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಮಕ್ಕಳು ದಮ್ಮಯ್ಯ ಅಂದರೂ, ಕಾಲಿಗೆ ಬಿದ್ದರೂ ಬಿಟ್ಟಿಲ್ಲ. ಅಲ್ಲದೇ ಒಂದು ಮಗುವಿನ ಕೈ ಮುರಿದು ಹೋಗುವಂತೆ ಥಳಿಸಿದ್ದಾನೆ.

ಮೂರು ದಿನಗಳ ನಂತರ ಈ ಬಗ್ಗೆ ಮಕ್ಕಳು ಪೋಷಕರಿಗೆ ತಿಳಿಸಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ರಾತ್ರೋ ರಾತ್ರಿ ವಸತಿ ಶಾಲೆಗೆ ಬಂದ ಪೋಷಕರು, ಸದ್ಯ ತಲೆ ಮರೆಸಿಕೊಂಡಿರುವ ಭರತ್ ವಿರುದ್ಧ ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಆರೋಪಿಯ ಬಂಧನಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.