ಕುವೈತ್‌ನ ಅಪಘಾತದಲ್ಲಿ ಕಾರವಾರ ಯುವಕ ಸಾವು, ಮೃತ ದೇಹವನ್ನು ಭಾರತಕ್ಕೆ ತರಲು ಪೋಷಕರ ಪರದಾಟ…

302
firstsuddi

ಕಾರವಾರ: ತಾಲ್ಲೂಕಿನ ಕಡವಾಡದ ಕ್ರಿಶ್ಚಿಯನ್ ವಾಡದ ನಿವಾಸಿ ರಾಬಿನ್‌ಸನ್ ರೊಸಾರಿಯೋ, ಕುವೈತ್‌ನಲ್ಲಿ ಭಾನುವಾರ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ತಮ್ಮ ಪುತ್ರನ ಶವವನ್ನು ಭಾರತಕ್ಕೆ ತರಲು ಸಹಾಯ ಮಾಡುವಂತೆ ಅವರ ತಾಯಿ ಮೇರಿ ಫ್ರಾನ್ಸಿಸ್ ರೊಸಾರಿಯೋ ಜಿಲ್ಲಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿದ್ದಾರೆ. ತಮ್ಮ ಕುಟುಂಬ ಆರ್ಥಿಕವಾಗಿ ದುರ್ಬಲವಾಗಿದೆ. ಆದ್ದರಿಂದ ಪುತ್ರನ ಶವವನ್ನು ಕಳುಹಿಸಿಕೊಡಲು ಸಹಕರಿಸುವಂತೆ ಕುವೈತ್‌ನ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪ‍ರ್ಕಿಸಬೇಕು ಎಂದು ಅವರು ಕೋರಿದ್ದಾರೆ.ರಾಬಿನ್‌ಸನ್ ಕುವೈತ್‌ನ ದಜೀಜ್‌ ಪ್ರದೇಶದಲ್ಲಿರುವ ಕುವೈತ್ ಫುಡ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು. ಅಲ್ಲಿನ ಕಿಂಗ್ ಅಬ್ದುಲ್ ಅಜೀಜ್ ರಸ್ತೆಯಲ್ಲಿ ಮೂರು ವಾಹನಗಳು ಪರಸ್ಪರ ಡಿಕ್ಕಿಯಾಗಿ ಈ ಅಪಘಾತವಾಗಿದೆ ಎಂದು ಅಲ್ಲಿನ ವೆಬ್ ಪತ್ರಿಕೆಗಳು ವರದಿ ಮಾಡಿವೆ. ಕೇಂದ್ರಕ್ಕೆ ಪತ್ರ: ‘ಘಟನೆ ಕುರಿತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ. ಕೆ. ಹರೀಶ್ ಕುಮಾರ್ ತಿಳಿಸಿದರು.