ಕೃಷಿಯಲ್ಲಿ ಪರಿಸರ ಸ್ನೇಹಿ ಆವಿಷ್ಕಾರಕ್ಕೆ ಕೇಂದ್ರ ಸಚಿವ ಸದಾನಂದಾಗೌಡ ಕರೆ…

160
firstsuddi

ಬೆಂಗಳೂರು : ಕೃಷಿ ಕ್ಷೇತ್ರದಲ್ಲಿ ನಿರಂತರವಾಗಿ ಆವಿಷ್ಕಾರಗಳು ನಡೆಯುತ್ತಿರಬೇಕು, ಆದರೆ ಅವು ಪರಿಸರ ಸ್ನೇಹಿಯಾಗಿರಬೇಕು. ಬೇಸಾಯ ಸುಸ್ಥಿರವಾಗಿರಬೇಕು ಎಂದಾದರೆ ರೈತರು ರಸಗೊಬ್ಬರ ಬಳಕೆ ತಗ್ಗಿಸಿ ಸಾವಯವ ಕೃಷಿಗೆ ಒತ್ತು ನೀಡಬೇಕು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ಅವರು ಕರೆ ನೀಡಿದ್ದಾರೆ.
ಭಾರತೀಯ ಕೈಗಾರಿಕೆಗಳ ಒಕ್ಕೂಟವು(ಸಿಐಐ) ಆಶ್ರಯದಲ್ಲಿ ಸಂಘಟಿಸಲಾಗಿರುವ “ಸಿಐಐ ಆಗ್ರೋ & ಫುಡ್ ಟೆಕ್ 2020” ವರ್ಚುವಲ್ ಕಾನ್ಫರೆನ್ಸ್ ಉದ್ದೇಶಿಸಿ ಮಾತನಾಡಿದ ಸಚಿವ ಸದಾನಂದಾಗೌಡ ಅವರು, ದೀರ್ಘಕಾಲದವರೆಗೆ ಮಣ್ಣಿನ ಫಲವತ್ತತೆಯನ್ನು ಕಾಯ್ದುಕೊಳ್ಳಲು ಸಾವಯವ ಕೃಷಿ ಅನಿವಾರ್ಯ ಎಂದರು.
ರೈತರಿಗೆ ಬೇಸಾಯ ಮಾಡಲು ಅಗತ್ಯವಾದ ಬಿತ್ತನೆ ಬೀಜ, ರಸಗೊಬ್ಬರ, ನೀರು ಮುಂತಾದ ಮೂಲ ಅವಶ್ಯಕತೆಗಳು ಹಾಗೂ ಬೇಸಾಯವನ್ನು ಸುಲಭಗೊಳಿಸುವ ತಂತ್ರಜ್ಞಾನವನ್ನು ಒದಗಿಸುವಲ್ಲಿ ಕೇಂದ್ರ ಸರ್ಕಾರದೊಂದಿಗೆ ಖಾಸಗಿ ಕಂಪನಿಗಳು ಸಕ್ರಿಯವಾಗಿ ಕೈಜೋಡಿಸುವುದು ಅವಶ್ಯಕವಾಗಿದೆ. ಕೃಷಿಗೆ ಪೂರಕ ವಾತಾವರಣ ಮೂಡಿಸುವ ಹೊಣೆಗಾರಿಕೆ ಸರ್ಕಾರ ಹಾಗೂ ಖಾಸಗಿ ವಲಯ ಎರಡರ ಮೇಲೂ ಇದೆ ಎಂದು ಅಭಿಪ್ರಾಯಪಟ್ಟರು.
ಅನಾನುಕೂಲ ವಾತಾವರಣಗಳ ಮಧ್ಯೆಯೂ ಕೃಷಿ ವಲಯವು ಉತ್ತಮ ಪ್ರಗತಿ ಸಾಧಿಸುತ್ತಿದೆ. ಈ ಬಾರಿ ಸಕಾಲದಲ್ಲಿ ಬಂದ ಉತ್ತಮ ಮಳೆಯಿಂದ ಬಿತ್ತನೆ ಪ್ರದೇಶ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಆದರೆ ನಮ್ಮ ಇಲಾಖೆಯು ಉತ್ಪಾದನೆ, ಸಾಗಾಣೆಗೆ ಸಂಬಂಧಿಸಿದಂತೆ ಸಕಾಲದಲ್ಲಿ ಕೈಗೊಂಡ ಕ್ರಮಗಳಿಂದಾಗಿ ದೇಶಾದ್ಯಂತ ಅತ್ಯಂತ ಸಮರ್ಪಕವಾಗಿ ರಸಗೊಬ್ಬರ ಪೂರೈಕೆಯಾಗಿದ್ದು, ಎಲ್ಲೂ ಕೊರತೆ ಎದುರಾಗಿಲ್ಲ. ಎಂದು ತಿಳಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ ರಸಗೊಬ್ಬರ ವಲಯದಲ್ಲಿ ಸಂಪೂರ್ಣ ಸ್ವಾವಲಂಬನೆ ಗಳಿಸುವಲ್ಲಿ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆಯು ಅನೇಕ ಕ್ರಮಗಳನ್ನು ಕೈಗೊಂಡಿದೆ. ಪೊಟ್ಯಾಶ್ ಗೊಬ್ಬರಕ್ಕೆ ಸಂಬಂಧಿಸಿದಂತೆ ನಾವು ಬಹುತೇಕ ಆಮದನ್ನೇ ಅವಲಂಬಿಸಿದ್ದೇವೆ. ಆದರೆ ಶೇಕಡ 80 ರಷ್ಟು ಯೂರಿಯಾ ದೇಶದಲ್ಲಿಯೇ ಉತ್ಪಾದನೆ ಮಾಡುತ್ತಿದ್ದೇವೆ. ಫಾಸ್ಫೆಟಿಕ್ ನಮೂನೆಯ ಗೊಬ್ಬರ ಅರ್ಧದಷ್ಟು ನಮ್ಮಲ್ಲಿಯೇ ಉತ್ಪಾದನೆ ಆಗುತ್ತದೆ. ರಸಗೊಬ್ಬರಕ್ಕೆ ಅಗತ್ಯವಾದ ಕಚ್ಚಾವಸ್ತುಗಳನ್ನು ನೇರ ಆವಕಕ್ಕೆ ಪ್ರಯತ್ನಿಸಲಾಗುತ್ತಿದೆ. ವಿದೇಶಿ ಕಂಪನಿಗಳ ಜೊತೆ ಪಾಲುಗಾರಿಕೆ ಹೊಂದಲು ಭಾರತದ ಖಾಸಗಿ ರಸಗೊಬ್ಬರ ಕಂಪನಿಗಳಿಗೆ ಉತ್ತೇಜನ ನೀಡಲಾಗುತ್ತಿದೆ ಎಂದು ವಿವರಿಸಿದರು.
ರಸಗೊಬ್ಬರ ಇಲಾಖೆಯು ದೇಶಾದ್ಯಂತ ರಸಗೊಬ್ಬರ ಪೂರೈಕೆಯನ್ನು ಸಮರ್ಪಕವಾಗಿ ಹಾಗೂ ಕರಾರುವಕ್ಕಾಗಿ ಕೈಗೊಳ್ಳಲು ಉನ್ನತ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ರೈತರಿಗೆ ದೊರೆಯುವ ರಿಯಾಯಿತಿ ಸೋರಿಕೆಯಾಗದಂತೆ ತಡೆಯಲು ನೇರ ನಗದು ವರ್ಗಾವಣೆ ವ್ಯವಸ್ಥೆಯನ್ನು (ಡಿಬಿಟಿ ಸಿಸ್ಟಮ್) ಅಳವಡಿಸಿಕೊಳ್ಳಲಾಗಿದೆ. ಮೇಲಿಂದ ಮೇಲೆ ಈ ತಂತ್ರಾಂಶ/ದತ್ತಾಂಶಗಳನ್ನು ಉನ್ನತೀಕರಣಗೊಳಿಸಲಾಗುತ್ತಿದ್ದು, “ ಗವರ್ನನ್ಸ್ ಡಿಜಿಟಲ್ ಟ್ರಾನ್ಸ್ ಫಾರ್ಮೇಷನ್ ಅವಾಡ್” ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಇಲಾಖೆ ಭಾಜನವಾಗಿದೆ ಎಂದು ತಿಳಿಸಿದರು.