ನವದೆಹಲಿ : ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸಿದ ಪ್ರತಿಭಟನೆಯಲ್ಲಿ ಸುಮಾರು 700 ರೈತರು ಸಾವನ್ನಪ್ಪಿದ್ದಾರೆ. ಪ್ರಧಾನಿಯವರು ದೇಶದ ರೈತರಲ್ಲಿ ಕ್ಷಮೆಯಾಚಿಸಿದ್ದಾರೆ. ಹೋರಾಟದಲ್ಲಿ ಮೃತಪಟ್ಟ ರೈತರಿಗೆ ಪರಿಹಾರ ಕೊಡಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಲೋಕಸಭೆಯಲ್ಲಿ ಒತ್ತಾಯ ಮಾಡಿದ್ದಾರೆ.
ಮೃತ ರೈತರಿಗೆ ಪರಿಹಾರ ನೀಡಲ್ಲ ಎಂಬ ಸರ್ಕಾರದ ಹೇಳಿಕೆಯನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಿದ ರಾಹುಲ್ ಗಾಂಧಿ, ನವೆಂಬರ್ 30ರಂದು ಕೃಷಿ ಸಚಿವರಾದ ನರೇಂದ್ರ ತೋಮರ್ ಮಾತನಾಡಿ ಪ್ರತಿಭಟನೆಯಲ್ಲಿ ಎಷ್ಟು ರೈತರು ಪ್ರಾಣಕಳೆದುಕೊಂಡರು, ನಮ್ಮ ಬಳಿ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. ಪಂಜಾಬ್ ಸರ್ಕಾರವು ಸುಮಾರು 400 ರೈತರಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಿರುವುದನ್ನು ನೋಡಿದ್ದೇವೆ. ಇದರಲ್ಲಿ 152 ಮಂದಿಯ ಕುಟುಂಬಗಳಿಗೆ ಉದ್ಯೋಗ ನೀಡಿದೆ. ನನ್ನ ಬಳಿ ಪಟ್ಟಿ ಇದೆ. ನಾವು ಹರಿಯಾಣದ 70 ರೈತರ ಮತ್ತೊಂದು ಪಟ್ಟಿಯನ್ನು ಮಾಡಿದ್ದೇವೆ. ಆದರೆ, ನೀವು ಮೃತ ರೈತರ ಮಾಹಿತಿ ಇಲ್ಲ ಎನ್ನುತ್ತಿದ್ದೀರಿ. ರೈತರಿಗೆ ಅವರಿಗೆ ಪರಿಹಾರದ ಜೊತೆಗೆ ಅವರ ಕುಟುಂಬಗಳಿಗೆ ಉದ್ಯೋಗ ನೀಡಬೇಕು ಎಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.










