ಬೆಂಗಳೂರು : ನಾಡಪ್ರಭು ಕೆಂಪೇಗೌಡರ ಪ್ರತಿಮೆ ಪ್ರತಿಷ್ಠಾಪಿಸಿದ ಕೂಡಲೇ ಒಕ್ಕಲಿಗರ ಮತ ಬಿಜೆಪಿಗೆ ಹೋಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಬಿಜೆಪಿ ಟಾಂಗ್ ಕೊಟ್ಟಿದ್ದಾರೆ.
ಕೆಂಪೇಗೌಡರ ಪ್ರತಿಮೆ, ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಂಪೇಗೌಡ ಪ್ರತಿಮೆ ಅನಾವರಣ ಒಂದು ಭಾಗ. ಮೋದಿ ಬರುತ್ತಾರೆ ಹೋಗುತ್ತಾರೆ ಅಷ್ಟೆ. ಈಗಾಗಲೇ ಇದು ಬಿಜೆಪಿಯ ನಿಯೋಜಿತ ಕಾರ್ಯಕ್ರಮ ಅಷ್ಟೆ. ಅದಕ್ಕೆ ನಾನು ಹೆಚ್ಚಿನ ಮಹತ್ವ ಕೊಡುವುದಿಲ್ಲ ಎಂದಿದ್ದಾರೆ.
ಕೆಂಪೇಗೌಡ ಪ್ರತಿಮೆಯಿಂದ ಬಿಜೆಪಿಗೆ ಒಕ್ಕಲಿಗರ ಮತ ಹೋಗುತ್ತದೆ ಎಂಬ ಭ್ರಮೆ ಬೇಡ. ಕೆಂಪೇಗೌಡ ಪ್ರತಿಮೆ ಮಾಡಿ, ಮೋದಿ ಕೈಯಲ್ಲಿ ಉದ್ಘಾಟನೆ ಮಾಡಿಸಿದರೆ ಒಕ್ಕಲಿಗರು ಮತ್ತು ಕನ್ನಡಿಗರು ಬಿಜೆಪಿ ಹಿಂದೆ ಹೋಗುವುದಿಲ್ಲ. ಅಂತಹ ಭ್ರಮೆಯಲ್ಲಿ ಬಿಜೆಪಿ ಅವರು ಇದ್ದರೆ, ಆ ಭ್ರಮೆಯಿಂದ ಜನರೇ ಅವರನ್ನು ಹೊರಗೆ ತರುತ್ತಾರೆ ಎಂದರು.
ಕೆಂಪೇಗೌಡರ ಕನಸು ನನಸಾದಾಗ ನಾವು ಕೆಂಪೇಗೌಡರಿಗೆ ಗೌರವ ಕೊಟ್ಟ ಹಾಗೆ. ಬೆಂಗಳೂರು ನಗರ ಇಷ್ಟು ದೊಡ್ಡದಾಗಿ ಬೆಳೆದಿದೆ. ಬೆಂಗಳೂರಿನಲ್ಲಿ ನಿರುದ್ಯೋಗ ಹೆಚ್ಚಾಗಿದೆ. ಎರಡು ರಾಷ್ಟ್ರೀಯ ಪಕ್ಷಗಳು ಬೆಂಗಳೂರಿನಲ್ಲಿ ದೊಡ್ಡ ಅನಾಹುತ ಮಾಡಿವೆ. ಅದನ್ನು ಸರಿಪಡಿಸುವ ಕೆಲಸ ಮಾಡಿ ಕೆಂಪೇಗೌಡರಿಗೆ ಗೌರವ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.










