ಕೆಎಸ್‌ಆರ್‌ಟಿಸಿ ಬಸ್‍ಗೆ ಪ್ರವಾಸಿ ಬಸ್ ಡಿಕ್ಕಿ – 9 ಮಂದಿ ಸಾವು…

56
firstsuddi

ತಿರುವನಂತಪುರಂ : ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಪ್ರವಾಸಿ ಬಸ್ ವೊಂದು ಕೆಎಸ್‌ಆರ್‌ಟಿಸಿ ಬಸ್ ಗೆ ಡಿಕ್ಕಿ ಹೊಡೆದ ಪರಿಣಾಮ ಐವರು ವಿದ್ಯಾರ್ಥಿಗಳು ಸೇರಿ ಒಂಬತ್ತು ಮಂದಿ ಸಾವನ್ನಪ್ಪಿರುವ ಘಟನೆ ಪಾಲಕ್ಕಾಡ್ ನ ವಡಕ್ಕಂಚೇರಿ ಎಂಬಲ್ಲಿ ನಡೆದಿದೆ.

ಮೃತರನ್ನು ವಿಷ್ಣು ವಿ ಕೆ (33), ಅಂಜನಾ ಅಜಿತ್ (17), ಇಮ್ಯಾನುಯೆಲ್ ಸಿ ಎಸ್ (17), ಕ್ರಿಸ್ ವಿಂಟರ್ ಬಾರ್ನ್ ಥಾಮಸ್ (15), ದಿಯಾ ರಾಜೇಶ್ (15) ಮತ್ತು ಎಲ್ನಾ ಜೋಸ್ (15) ಎಂದು ಗುರುತಿಸಲಾಗಿದೆ. ಮೃತ ಕೆಎಸ್‌ಆರ್‌ಟಿಸಿ ಪ್ರಯಾಣಿಕರನ್ನು ತ್ರಿಶೂರ್ ಮೂಲದ ರೋಹಿತ್ ರಾಜ್ (24), ಒ.ಅನೂಪ್ (22) ಮತ್ತು ದೀಪು (25) ಎಂದು ಗುರುತಿಸಲಾಗಿದೆ.

ಪ್ರವಾಸಿ ಬಸ್ ಎರ್ನಾಕುಲಂನ ಮಾರ್ ಬಸೆಲಿಯೋಸ್ ಶಾಲೆಗೆ ಸೇರಿದ್ದು, ಇವರೆಲ್ಲ ತಮಿಳುನಾಡು ಪ್ರವಾಸಕ್ಕೆ ತೆರಳುತ್ತಿದ್ದರು. ನಿನ್ನೆ ಮಧ್ಯರಾತ್ರಿ ವಡಕ್ಕಂಚೇರಿಯಲ್ಲಿ ಟೂರಿಸ್ಟ್ ಬಸ್ ಕೊಟ್ಟಾರಕ್ಕರ-ಕೊಯಮತ್ತೂರು ಸೂಪರ್ ಫಾಸ್ಟ್ ಬಸ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.

ಟೂರಿಸ್ಟ್ ಬಸ್ ನಲ್ಲಿ 41 ವಿದ್ಯಾರ್ಥಿಗಳು, ಐವರು ಶಿಕ್ಷಕರು ಮತ್ತು ಬಸ್ ನ ಇಬ್ಬರು ಸಿಬ್ಬಂದಿ ಪ್ರಯಾಣಿಸುತ್ತಿದ್ದರು ಮತ್ತು ಕೆಎಸ್‌ಆರ್‌ಟಿಸಿ ಬಸ್ನಲ್ಲಿ 49 ಮಂದಿ ಪ್ರಯಾಣಿಕರಿದ್ದರು. ಕೆಎಸ್‌ಆರ್‌ಟಿಸಿ ಬಸ್ ನಲ್ಲಿ ಮೂವರು ಮತ್ತು ಟೂರಿಸ್ಟ್ ಬಸ್ ನಲ್ಲಿ ಐವರು ಸಾವನ್ನಪ್ಪಿದ್ದು, ಇವರಲ್ಲಿ ಆರು ಪುರುಷರು ಮತ್ತು ಮೂವರು ಮಹಿಳೆಯರಾಗಿದ್ದಾರೆ.

ಅಪಘಾತದಲ್ಲಿ 40 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಪಾಲಕ್ಕಾಡ್ ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದುರಂತಕ್ಕೆ ಟೂರಿಸ್ಟ್ ಬಸ್ ಚಾಲಕನ ಅತಿವೇಗದ ನಿರ್ಲಕ್ಷ್ಯ ಚಾಲನೆಯೇ ಕಾರಣ ಎಂದು ತಿಳಿದುಬಂದಿದೆ.