ಕೇಂದ್ರದಲ್ಲಿ ಕಾಂಗ್ರೆಸ್- ಭಾಜಪ ಆಡಳಿತ ಏಳು ದಶಕಗಳ ಏಳುಬೀಳು!

413
Firstsuddi

ಡಾ. ಎಂ.ಎಸ್. ಮಣಿ

ವಿನಾಯಕ, ಜೆರಾಕ್ಸ್ ಅಂಗಡಿ ನಡೆಸುವ 35ರ ಉತ್ಸಾಹಿ ತರುಣ ಹಿಂದುಳಿದ ಸಮುದಾಯದ ಹಾಸನ ಮೂಲದ, ಸರಳ ವ್ಯಕ್ತಿತ್ವದವರು. ವಾಹಿನಿಗಳಲ್ಲಿ ಬರುವ ರಾಷ್ಟ್ರಪ್ರೇಮದ ಭಾಷಣಗಳನ್ನೆಲ್ಲಾ ನಿಜವೆಂದು ಬದುಕುತ್ತಿರುವ ಅಮಾಯಕ. ದೇಶವೆಲ್ಲವೂ ಕಸ್ತೂರಿ ನಗರದಂತೆ ಸುಂದರವಾಗಿದೆ. ಇಲ್ಲಿರುವಂತೆ ಜನ ಎಲ್ಲೆಡೆ ಸುಖಿಗಳಾಗಿದ್ದಾರೆಂದು ಭಾವಿಸಿದ್ದಾರೆ. ಇತ್ತೀಚೆಗೆ ಭೇಟಿಯಾದಾಗ ಲೋಕಾರೂಢಿಯಾಗಿ ಚುನಾವಣೆ ಎಂದಿದ್ದೇ ತಡ ‘ಏಕ್‌ದಂ’ ಮೋದಿ ಬರಬೇಕು ಸರ್. 350 ಬಂದುಬಿಟ್ಟರೆ ಗಡಿ ಸಮಸ್ಯೆಯೇ ಇರುವುದಿಲ್ಲ ಎಂದು ಬಡಬಡಿಸಿದರು. ನಾನಾಗ ನಿರುದ್ಯೋಗ, ಹಸಿವಿನ ಸಾವುಗಳ ಕುರಿತು ವಿವರಿಸಿದೆ. ದೇಶದಲ್ಲಿ ಅನ್ಯಾಯ ತಾಂಡವವಾಡುತ್ತಿದೆ ಎಂದು ಶೇಕಡ 70 ರಷ್ಟು ಭಾರತೀಯರು ಭಾವಿಸಿದ್ದಾರೆಂಬ ಎಡ್ಲ್ಮನ್ ಟ್ರಸ್ಟ್ ಬ್ಯಾರೋ ಮೀಟರ್ ಎಂಬ ಆನ್‌ಲೈನ್ ಸಮೀಕ್ಷೆಯ ವರದಿ ಬಗ್ಗೆಯೂ ಹೇಳಿದೆ. ಅಂiÉೂ್ಯೀ 60 ವರ್ಷ ಕಾಂಗ್ರೆಸ್ ಪಕ್ಷ ದೇಶವನ್ನು ಹಾಳುಗೆಡವಿದೆ. 5 ವರ್ಷದಲ್ಲಿ ಮೋದಿ ಏನು ಮಾಡಲು ಸಾಧ್ಯ. ಇನ್ನೊಂದೈದು ವರ್ಷ ಅಧಿಕಾರ ಕೊಟ್ಟು ನೋಡಿ. ಗಡಿ ಸಮಸ್ಯೆಯೇ ಇರೋದಿಲ್ಲ ಎಂದು ಮೋದಿ ಗುಣಗಾನದಲ್ಲಿ ತಲ್ಲೀನರಾದರು. ಇದು ವಿನಾಯಕನೊಬ್ಬನ ಮಾತಲ್ಲ. ನನಗೆ ಸಿಕ್ಕ ಊಬರ್ ಚಾಲಕ, ವಕೀಲ, ಹೊಟೆಲ್ ಮಾಣಿಯ ಅಭಿಪ್ರಾಯವೂ ಇದೇ ಆಗಿದೆ. ಹೀಗಾಗಿ ಏಳು ದಶಕಗಳ ಕಾಂಗ್ರೆಸ್ -ಭಾಜಪ ಆಡಳಿತದ ಏಳುಬೀಳನ್ನು ನಿಮ್ಮ ಮುಂದಿಟ್ಟಿರುವೆ.
ನಾನಿಲ್ಲಿ ಎರಡು ಪಕ್ಷಗಳನ್ನು ಒಂದೇ ದೃಷ್ಟಿಯಲ್ಲಿ ಯಾವುದೇ ರಾಗ, ದ್ವೇಷ, ಪ್ರೀತಿಯಿಲ್ಲದೆ ವಿಶ್ಲೇಷಿಸಿದ್ದೇನೆ. ದೇಶದ ಐಕ್ಯತೆಯ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ದೇಶ ವಿಭಜನೆಗೆ ಅವಕಾಶ ಮಾಡಿಕೊಟ್ಟಿತೆಂಬ ಆಪಾದನೆ ಇದೆ. ಇದನ್ನು ಕಾಂಗ್ರೆಸ್ ಪಕ್ಷದ ವಿಫಲ ಎನ್ನಲೂ ಆಗದು. ಕಾರಣ, ನಿಜಾಮರ ಆಡಳಿತವನ್ನು ಕೊನೆಗಾಣಿಸಿ, ಹೈದರಾಬಾದ್ ಸಂಸ್ಥಾನವನ್ನು ದೇಶದೊಳಗೆ ತಂದಿದ್ದು ಕಾಂಗ್ರೆಸ್ ಪಕ್ಷ. ಹಾಗೆಯೇ ತಮಿಳುನಾಡು, ಮಿಜೋರಾಂ, ಪಂಜಾಬ್, ನಾಗಾಲ್ಯಾಂಡ್‌ಗಳಲ್ಲಿದ್ದ ಪ್ರತ್ಯೇಕತಾವಾದವನ್ನು ಹತ್ತಿಕ್ಕಿದ್ದೂ ಕೂಡ ಕಾಂಗ್ರೆಸ್ ಪಕ್ಷ. ಕಾಶ್ಮೀರದ ವಿಷಯದಲ್ಲಿ ಎಡವಿದ್ದು ಕಾಂಗ್ರೆಸ್ ಪಕ್ಷ. ಇದೇ ರೀತಿ ಭಾಜಪ ಕೂಡ ಕಾಶ್ಮೀರದ ವಿಚಾರದಲ್ಲಿ ವಿಫಲವಾಗಿದೆ. ಒಂದು ಬಾರಿ ಅಧಿಕಾರ ಸಿಕ್ಕರೆ ಕಾಶ್ಮೀರದ ಚಹರೆಯನ್ನೇ ಬದಲಾಯಿಸುತ್ತೇನೆ ಎಂದಿದ್ದ ಭಾಜಪ ಒಂದು ದಶಕದ ಆಡಳಿತದಲ್ಲಿ ಸಾಧಿಸಿದ್ದೇನೆಂಬುದು ಅರ್ಥವಾಗುತ್ತಿಲ್ಲ.
ಇತ್ತೀಚೆಗೆ ಪ್ರಧಾನಿ ಖಾಸಗಿ ಸುದ್ದಿ ಸಂಸ್ಥೆಯೊಂದಕ್ಕೆ ಒಂದೂವರೆ ತಾಸಿನ ಸಂದರ್ಶನ ನೀಡಿದ್ದರು. ಅದರಲ್ಲಿ ‘2018’ ಭಾರತದ ಪಾಲಿಗೆ ಅತ್ಯಂತ ‘ಪ್ರಕಾಶಮಾನ’ವಾಗಿತ್ತೆಂದು ಹೇಳಿದ್ದರು. ‘ಪ್ರಕಾಶನಮಾನ’ ಎಂಬ ಶಬ್ಧವನ್ನು ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗಲೂ ಕೇಳಿದ್ದೆವು. ಸಂದರ್ಶನದ ನಡುವೆ ಎಲ್ಲಿಯೂ 2014 ರ ಪೂರ್ವದಲ್ಲಿ ನೀಡಿದ ಭರವಸೆಗಳ ಬಗ್ಗೆ ಪ್ರಸ್ತಾಪಿಸಲೇ ಇಲ್ಲ. ಕಾರಣ, ಅಂದು ನೀಡಿದ್ದ ಭರವಸೆಗಳಲ್ಲಿ ಬಹುತೇಕ ಹಾಗೆಯೇ ಇವೆ. ಆದಾಗ್ಯೂ ಮೋದಿ ಮತ್ತೆ ದೇಶದ ಅಧಿಕಾರದ ಚುಕ್ಕಾಣಿ ಹಿಡಿಯುತ್ತೇವೆಂಬ ಧಾವಂತದಲ್ಲಿದ್ದಾರೆ. 2014 ರ ಮಹಾಚುನಾವಣೆಯಲ್ಲಿ ಅಭಿವೃದ್ಧಿ ಎಂಬ ದಾಳವನ್ನು ಉದುರಿಸಿ ಮೋದಿ ದೇಶದ ಗದ್ದುಗೆ ಏರಿದ್ದರು. ಜನ ಮೋದಿ ಪ್ರಧಾನಿ ಪೀಠಕ್ಕೇರಿದರೆ, ಭ್ರಷ್ಟಾಚಾರ ಮಾಯವಾಗುತ್ತದೆ, ಉದ್ಯೋಗ ಸೃಷ್ಟಿಯಾಗುತ್ತದೆ, ಸರ್ಕಾರಿ ಯಂತ್ರ ಪರಿಶುದ್ಧವಾಗುತ್ತದೆ, ಜನಸಾಮಾನ್ಯರ ಬದುಕು ಹಸನಾಗುತ್ತದೆ ಎಂಬ ಕನಸು ಹೊತ್ತು ಕಮಲವನ್ನು ಅಪ್ಪಿ ನಡೆದಿದ್ದರು.

ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದಲ್ಲಿನ ಸಚಿವರು ಒಂದಲ್ಲ ಒಂದು ಹಗರಣದಲ್ಲಿ ಭಾಗಿಯಾಗಿದ್ದಾರೆಂಬ ಆಪಾದನೆ ಹೊತ್ತಿದ್ದರು. ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದೊಳಗಿನ ಸಚಿವರ ಮೇಲೆ ಅಷ್ಟೊಂದು ಗಂಭೀರ ಆಪಾದನೆಗಳು ಎದ್ದಿಲ್ಲ. ಆದರೆ, ಬಡಜನರ ಭೂಮಿ, ತೆರಿಗೆ ಹಣ ಖಾಸಗಿಯವರ ಪಾಲು ಮಾಡಿದರೆಂಬ ಆರೋಪ ಇದೆ. ಆದರೂ, ಕೆಲವು ವರದಿಗಳನ್ನು, ಸಮೀಕ್ಷೆಗಳನ್ನು ಗಮನಿಸಿದರೆ ಇದೇನಾ ನಮ್ಮ ಭಾರತ ಎಂದು ಚಿಂತೆ ಮೂಡಿಸುತ್ತದೆ.
ವಿಶ್ವ ಸಂತೋಷದ ವರದಿ (W.ಊ.ಖ) 2018 158 ರಾಷ್ಟ್ರಗಳ ಪಟ್ಟಿಯನ್ನು ಮಾಡಿದೆ. ಅದರಲ್ಲಿ ನಮ್ಮದು 113ನೇ ಸ್ಥಾನ. ವಿಶ್ವ ಹಸಿವಿನ ಸೂಚ್ಯಂಕ ಮಾಡಿರುವ 123 ರಾಷ್ಟ್ರಗಳ ಪಟ್ಟಿಯಲ್ಲಿ ನಮ್ಮದು 103ನೇ ಸ್ಥಾನ. ವಿಶ್ವ ಶಾಂತಿ ಸೂಚ್ಯಂಕ 2008 ರಲ್ಲಿ ನಾವು 123ನೇ ಸ್ಥಾನ ಹೊಂದಿದ್ದೇವೆ. 2015 ರಲ್ಲಿ 143ನೇ ಸ್ಥಾನ ಹೊಂದಲಾಗಿತ್ತು. ಅಂತರರಾಷ್ಟ್ರೀಯ ಪತ್ರಕರ್ತರ ಒಕ್ಕೂಟದ 2016 ರ ವರದಿಯಂತೆ ನಮ್ಮ ದೇಶ ಪತ್ರಕರ್ತರಿಗೆ 8ನೇ ಅಪಾಯಕಾರಿ ದೇಶವಾಗಿದೆ.
ನಮ್ಮ ದೇಶ ಹಿಂದೆಂದೂ ಕಾಣದಷ್ಟು ಪರಿಸರ ಮಾಲಿನ್ಯಗೊಂಡಿದೆ. ಇದು ದೇಶದ ಅಭಿವೃದ್ಧಿ ಪಾಲನ್ನು ನುಂಗಿಹಾಕುತ್ತಿದೆ ಎಂದೇ ಹೇಳಬಹುದು. ಅತ್ಯಂತ ಮಲೀನಗೊಂಡ 20 ನಗರಗಳಲ್ಲಿ ನಮ್ಮ ಹೆಮ್ಮೆಯ ದೆಹಲಿ 13ನೇ ಸ್ಥಾನ ಹೊಂದಿದೆ. 2017 ಫೆಬ್ರವರಿಯ ವರದಿಯಂತೆ ಸುಮಾರು 3 ಸಾವಿರ ಜನ ವಾಯುಮಾಲಿನ್ಯದಿಂದ ಅಸುನೀಗಿದ್ದಾರೆ. ಜಗತ್ತಿನ ಅತ್ಯಾಚಾರದ ರಾಜಧಾನಿ ಎಂಬ ಕುಖ್ಯಾತಿಯೂ ನಮ್ಮದಾಗಿದೆ. 2017-18 ರ ಂಅಊಖ ವರದಿಯಂತೆ ಕಸ್ಟಡಿಯಲ್ಲಿ ಇದ್ದಾಗಲೂ ಚಿತ್ರಹಿಂಸೆ ಕೊಟ್ಟು ಕೊಲ್ಲಲಾಗಿದೆ. ಶೇಕಡ 30 ರಷ್ಟು ಜನಪ್ರತಿನಿಧಿಗಳು ಅಪರಾಧಿಕ ಹಿನೆÀ್ನಲೆ ಹೊಂದಿದ್ದಾರೆ.
ಇವೆಲ್ಲಾ ಅಂಕಿ ಅಂಶಗಳ ವಾಸ್ತವಿಕತೆಯನ್ನು ಕಂಡಾಗ ದುಃಖವಾಗುತ್ತದೆ. ಆದರೂ ನೊಂದು-ಬೆಂದಾದರೂ ಸರಿ ದೇಶ ‘ಪ್ರಕಾಶಿಸುತ್ತಿದೆ’ ಎನ್ನಲೇಬೇಕು. ‘ಪ್ರಕಾಶಿಸುತ್ತಿದೆ’ ಎಂದು ಕೂಗಿ, ಕೂಗಿ ಜಾಗತಿಕ ಮಟ್ಟದಲ್ಲಿ ಕುಬ್ಜರಾಗುತ್ತಿದ್ದೇವೆ. ಆದರೂ, ಎತ್ತೆತ್ತರದ ಪ್ರತಿಮೆ ಹಾಕಿ ಮುಚ್ಚಿಡುತ್ತಿದ್ದೇವೆ. ಇರಲಿ, ಮೋದಿಯವರು ಪ್ರಧಾನಿ ಗದ್ದುಗೆ ಏರಿದ ನಂತರ, 35 ವಿದೇಶಿ ಪ್ರವಾಸಗಳನ್ನು ಮಾಡಿದ್ದಾರೆ. 53 ದೇಶಗಳಿಗೆ ಭೇಟಿ ನೀಡಿದ್ದಾರೆ. 2017 ರಲ್ಲಿ ಡೊಕ್ಲಾಮ್‌ನಲ್ಲಿ ಚೀನಾದೊಂದಿಗೆ ನಡೆಯಬೇಕಿದ್ದ ಯುದ್ಧವನ್ನು ತಪ್ಪಿಸಿದ್ದಾರೆ. 1999 ರಲ್ಲಿ ವಾಪಜಪೇಯಿ ಪ್ರಧಾನಿಯಾಗಿದ್ದಾಗ ಕಾರ್ಗಿಲ್ ಯುದ್ಧವನ್ನು ಗೆದ್ದುಕೊಟ್ಟಿದ್ದರು. ಒಂದು ದಶಕದ ಆಡಳಿತದಲ್ಲಿ ಭಾಜಪ ಎರಡು ಯುದ್ಧಗಳನ್ನು ಎದುರಿಸಿದೆ. ಕಾಂಗ್ರೆಸ್‌ನ 6 ದಶಕಗಳ ಆಡಳಿತದಲ್ಲಿ ಆರು ಯುದ್ಧಗಳನ್ನು ಎದುರಿಸಿದೆ. ಅವುಗಳಲ್ಲಿ 1947 ರಲ್ಲಿ ಕಾಶ್ಮೀರ, 1961 ರಲ್ಲಿ ಗೋವಾ, 1965 ರಲ್ಲಿ ಪಾಕಿಸ್ತಾನ, 1971 ರಲ್ಲಿ ಬಾಂಗ್ಲಾದೇಶದ ಮೇಲೆ ನಡೆದ ಯುದ್ಧಗಳಲ್ಲಿ ಗೆದ್ದಿದೆ. 1962 ರಲ್ಲಿ ಚೀನಾ, 1987 ರಲ್ಲಿ ಭಾರತೀಯ ಶಾಂತಿಪಾಲನಾ ಪಡೆ ಶ್ರೀಲಂಕಾದಲ್ಲಿ ಹಿನ್ನೆಡೆ ಕಂಡಿದೆ.
ಪ್ರಧಾನಿ ಗದ್ದುಗೆ ಏರಿದ ಆರಂಭದ ದಿನಗಳಲ್ಲಿ ಮೋದಿ ಅವರು ಸರ್ಕಾರಿ ಯಂತ್ರವನ್ನು ಬಲಗೊಳಿಸಲು ಮುಂದಾದರು. ಜಾಗತಿಕ ಮಟ್ಟದಲ್ಲಿ ದೇಶದ ಆರ್ಥಿಕತೆ ಉತ್ತಮಪಡಿಸುವುದಾಗಿ ಹೇಳಿ ಗಮನಸೆಳೆದರು. ತೈಲ ಬೆಲೆ, ಅಗತ್ಯ ವಸ್ತುಗಳ ಬೆಲೆ ಇಳಿಮುಖವಾಗುವುದರಲ್ಲಿತ್ತು. ಅದೆಲ್ಲಿತ್ತೋ 2016 ರ ನವೆಂಬರ್ ‘ನೋಟ್‌ಬ್ಯಾನ್’ ಆರ್ಥಿಕ ವ್ಯವಸ್ಥೆಯನ್ನೇ ಹೇಳುಗೆಡವಿತು. ಕಾಳಧನಿಕರು ಕೂಡಿಟ್ಟಿದ್ದ ಕಳ್ಳಧನವೆಲ್ಲವೂ ರಾತ್ರೋರಾತ್ರಿ ಅಕ್ರಮ-ಸಕ್ರಮ ಆಯಿತು. ನಿದ್ದೆಯಿಲ್ಲದ ಕಾಳಧನಿಕರು ಕಳ್ಳಧನವನ್ನು ಬ್ಯಾಂಕಿಗೆ ತುಂಬಿ ಸಂತೆಯಲ್ಲೂ ನಿದ್ದೆಹೋದರು. ಕೃಷಿ ಕೇತ್ರ ಬಿಟ್ಟರೆ, ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಕಲ್ಪಿಸಿಕೊಡುತ್ತಿದ್ದ ಅನೌಪಚಾರಿಕ ಕ್ಷೇತ್ರ ಸ್ತಬ್ಧವಾಯಿತು. ‘ನೋಟ್‌ಬ್ಯಾನ್’ ಉತ್ತಮ ಚಿಂತನೆ ಇರಬಹುದು. ಆದರೆ, ರಾತ್ರೋರಾತ್ರಿ ಬ್ಯಾನ್ ಮಾಡಿದ್ದರಿಂದ ಭಾರತದ ಕೃಷಿವಲಯ, ರಫ್ತು ಮತ್ತು ಸಣ್ಣ ಕೈಗಾರಿಕೆಗಳು ಕುಸಿದವು. ದೇಶದ ಆರ್ಥಿಕತೆಯ ಶೇ.86 ರಷ್ಟು ಅಂದರೆ, 17 ಲಕ್ಷ ಕೋಟಿ ಮೌಲ್ಯದ ಐದುನೂರು ಮತ್ತು ಒಂದು ಸಾವಿರ ಮುಖಬೆಲೆಯ ನೋಟುಗಳು ಸ್ಥಗಿತಗೊಂಡವು. ಹಣ ವಹಿವಾಟುಗಳಲ್ಲಿ ವ್ಯಾಪಾರ ಮಾಡಿ ಬದುಕುತ್ತಿದ್ದ ಅಪಾರ ಸಂಖ್ಯೆಯ ಮಧ್ಯಮ ಮತ್ತು ಇದಕ್ಕೂ ಕೆಳಗಿನ ವರ್ಗದ ಜನ ಉದ್ಯೋಗ ಕಳೆದುಕೊಂಡು ಬೀದಿಗೆ ಬಿದ್ದರು. ಸಣ್ಣ ಕೈಗಾರಿಕೆಗಳಿಗೆ ನೀಡಿದ್ದ ಸಾಲ ಬ್ಯಾಂಕುಗಳ ಅನುತ್ಪಾದಕ ಆಸ್ತಿಯಾಯಿತು. ದೊಡ್ಡ, ದೊಡ್ಡ ಉದ್ಯಮಿಗಳು ಪಡೆದಿದ್ದ 14 ಲಕ್ಷ ಕೋಟಿ ಕೆಟ್ಟ ಸಾಲವಾಗಿ ಸಾರ್ವಜನಿಕ ವಲಯದ ಬ್ಯಾಂಕುಗಳ ಮೇಲೆ ಹೊರೆ ಬಿತ್ತು.
ದೇಶದ ಆರ್ಥಿಕ ವ್ಯವಸ್ಥೆ ಕನಿಷ್ಟ 5 ವರ್ಷಗಳಲ್ಲಿ ಹಿಂದಕ್ಕೆ ಹೋಯಿತು. 2017 ರ ಹೊತ್ತಿಗೆ 1.5 ಮಿಲಿಯನ್ ಉದ್ಯೋಗಗಳನ್ನು ಕಳೆದುಕೊಳ್ಳಲಾಗಿದೆ ಎಂದು ದಿ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಏಕಾನಮಿ ಅಂದಾಜಿಸಿದೆ.
1951 ರಲ್ಲಿ ಕಾಂಗ್ರೆಸ್ ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಭಾರತವನ್ನು ಕೈಗಾರಿಕಾ ವಲಯವಾಗಿ ರೂಪಿಸಿತು. ಜೊತೆಗೆ ಸ್ಟೀಲ್ ಸ್ಥಾವರಗಳ ಆರಂಭಕ್ಕೂ ಕಾರಣೀಭೂತವಾಯಿತು. ದುಡಿಯುವ ಜನರ ಕೈಗೆ ಉದ್ಯೋಗ ಸಿಕ್ಕಿತು. ಸಾರ್ವಜನಿಕ ವಲಯಕ್ಕೆ ಹೆಚ್ಚು ಒತ್ತುಕೊಟ್ಟು ಉದ್ದಿಮೆಗಳನ್ನು ತೆರೆಯಲಾಯಿತು. ಆದರಿಂದು ಪೆಟ್ರೋಲಿಯಂ ಬಿಟ್ಟು ಉಳಿದೆಲ್ಲವೂ ನಷ್ಟದಲ್ಲಿದೆ. 1969 ರಲ್ಲಿ ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿತು. ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ತೆರೆಯಿತು. ಇದೀಗ ಕಾರ್ಯನಿರ್ವಹಿಸದ ಸ್ವತ್ತುಗಳ ಹೊರೆಯಿಂದ ತುಂಬಿಹೋಗಿದೆ. ಇದನ್ನು ಸರಿಪಡಿಸಿಕೊಳ್ಳಲು 1991 ರಲ್ಲಿ ಉದಾರೀಕರಣ ನೀತಿಯನ್ನು ತಂದಿತು. ಇದು ಕುಸಿಯುತ್ತಿರುವ ಆರ್ತಿಕತೆಗೆ ಊರುಗೋಲಾಯಿತು. ವಾಜಪೇಯಿ ಅವರು ಪ್ರಧಾನಿ ಆಗಿದ್ದಾಗ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಗೊಳಿಸಿದರು. ಇದು ಕೂಡ ಆರ್ಥಿಕಾಭಿವೃದ್ಧಿಗೆ ಅನುಕೂಲವಾಯಿತು.
ಆದರೆ, ಪ್ರಧಾನಿ ಮೋದಿ ಅವರು 2014 ರಿಂದ 2019ರವರೆಗೆ ತಮ್ಮ ಬ್ಯಾಂಕುಗಳಲ್ಲಿ ಸಾಲ ಎತ್ತಿ ಪರಾರಿಯಾದವರ ವಿರುದ್ಧ ಗಂಭೀರ ಕ್ರಮ ವಹಿಸಲೇ ಇಲ್ಲ. ಈ ಅವಧಿಯಲ್ಲಿ ಕಾರ್ಪೊರೇಟ್ ಕಂಪನಿಗಳು ಅಧಿಕ ಸಾಲ ಪಡೆದಿವೆ. ಇವರಲ್ಲಿ ಹಲವರು ಸಾಲ ಕಟ್ಟಲಾಗದೆ ದೇಶ ಬಿಟ್ಟು ಓಡಿಹೋಗಿದ್ದಾರೆ. ಸಾಲ ಎತ್ತಿ ಓಡಿಹೋದವರ ಆಸ್ತಿ ಹರಾಜು ಮಾಡಿ ಸಾಲಕ್ಕೆ ಹೊಂದಿಸಿಕೊಳ್ಳಬೇಕು. ಇದನ್ನು ಮಾಡದೆ ಕಾಲಹರಣದಲ್ಲಿ ಬ್ಯಾಂಕುಗಳು ತೊಡಗಿವೆ. ದೇಶಬಿಟ್ಟು ಓಡಿಹೋದವರ ಕಂಪನಿಗಳನ್ನು ಖರೀದಿಸಲು ಸರ್ಕಾರ ‘ಹೇರ್ ಕಟ್ ಪಾಲಿಸಿ’ ತಂದಿದೆ. ಇದರಂತೆ ಹೆಚ್ಚಿನ ಬಿಡ್ ಕೂಗಿದವರಿಗೆ ಕಂಪನಿಯನ್ನು ಒಪ್ಪಿಸಲಾಗುತ್ತದೆ. ಈ ಯೋಜನೆ ಅಳವಡಿಸಿಕೊಳ್ಳಲು ಸಾಲಕೊಟ್ಟ ಬ್ಯಾಂಕುಗಳಿಗೆ ಸರ್ಕಾರ ನಿರ್ದೇಶನ ನೀಡಿದೆ. ಅಂದರೆ, ಸಾಲ ಕಟ್ಟದೆ ಓಡಿಹೋದವನ ಕಂಪನಿಯ ಒಟ್ಟು ಮೌಲ್ಯದಲ್ಲಿ ಶೇಕಡ 20 ರಷ್ಟು ಹಣವನ್ನು ಬ್ಯಾಂಕ್‌ನಲ್ಲಿ ಅಡಮಾನ ಇಡಬೇಕು. ಇಷ್ಟಕ್ಕೆ ಓಡಿಹೋದವರ ಕಂಪನಿಗಳನ್ನು ಒಪ್ಪಿಸಲಾಗುತ್ತದೆ. ಹೀಗೆ ಕಂಪನಿ ಪಡೆಯುವರ‍್ಯಾರು ಎಂಬುದು ತನಿಖೆಗೆ ಒಳಪಡಬೇಕಿದೆ. ದೇಶಬಿಟ್ಟು ಓದಿಹೋದವರಿಗೆ ವಿವೇಚನೆ ಇಲ್ಲದೆ ಸಾಲ ಕೊಟ್ಟಿದ್ದರಿಂದಲೇ ಬ್ಯಾಂಕುಗಳು ನಷ್ಟಕ್ಕೆ ಬಿದ್ದಿವೆ. ಇದೀಗ ‘ಬಂಡವಾಳ ಮರುಸೃಷ್ಠಿ’ ಹೆಸರಲ್ಲಿ ಮತ್ತೊಮ್ಮೆ ಸಾರ್ವಜನಿಕ ಹಣವನ್ನು ಬಳಸಿಕೊಳ್ಳಲು ಸರ್ಕಾರ ಮುಂದಾಗಿರುವುದು ಆತಂಕ ಮೂಡಿಸುತ್ತದೆ.
ಇದಲ್ಲದೆ ಆರ್.ಬಿ.ಐ ನ ಹಣದುಬ್ಬರಕ್ಕೆ ಕಡಿವಾಣ ಹಾಕಲು ಬಡ್ಡಿದರವನ್ನು ಇಳಿಸಲು ಸರ್ಕಾರ ಒತ್ತಾಯ ಹೇರಿದೆ. ಆರ್ಥಿಕ ಚಟುವಟಿಕೆ ಹೆಚ್ಚಾಗಲಿ ಎಂಬ ಉದ್ದೆಶ ಸರ್ಕಾರಕ್ಕೆ ಇದೆ. ಇದಕ್ಕಾಗಿ ‘ಜನ್‌ಧನ್’ ಯೋಜನೆ ತರಲಾಯಿತು. ಇದರಿಂದ ಬಡವನ ಹಣ ಶ್ರಿಮಂತನ ಪಾಲಾಯಿತು. ರೈತರನ್ನು ಸಾಲದಲ್ಲಿ ದೂಡಿ ಬ್ಯಾಂಕುಗಳನ್ನು ‘ಮುದ್ರಾ ಯೋಜನೆ’ ಹೆಸರಲ್ಲಿ ‘ಅನುತ್ಪಾದಕ ಸಾಲ’ ಎಂಬ ಸುಳಿಯಲ್ಲಿ ಸಿಲುಕಿಸಲಾಗಿದೆ. ‘ಯೋಜನಾ ಆಯೋಗ;ವನ್ನು ‘ನೀತಿ ಆಯೋಗ’ ಎಂದು ಮಾಡಲಾಗಿದೆ.