ಬೆಂಗಳೂರು : ಕೇಂದ್ರ ಸರ್ಕಾರ 1869.85 ಕೋಟಿ ನೆರೆ ಪರಿಹಾರ ಹಣ ಬಿಡುಗಡೆ ಮಾಡಿರುವುದು ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಟ್ವಿಟರ್ ಮೂಲಕ ವ್ಯಂಗ್ಯವಾಡಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಗೋಗರೆತಕ್ಕೆ ಕರಗಿದ ನರೇಂದ್ರ ಮೋದಿ ಅವರು ರೂ.669.85 ಕೋಟಿ ಹೆಚ್ಚುವರಿ ನೆರೆಪರಿಹಾರ ದಯಪಾಲಿಸಿದ್ದು, ಒಟ್ಟು ಪರಿಹಾರ ರೂ.1869.85 ಆಗುತ್ತೆ. ಸುಳ್ಳು ದೇವರ ಭಕ್ತರಾದ ಬಿಜೆಪಿ ನಾಯಕರು ಪರಿಹಾರದ ಮೊತ್ತ 1200+1869.85=ರೂ.3069 ಕೋಟಿ ಎಂದು ಹೇಳಿ ಸಂಭ್ರಮಿಸುತ್ತಿರುವುದು ತಮಾಷೆಯಾಗಿದೆ. ಕೇಂದ್ರ ಸರ್ಕಾರ ನೀಡಿರುವ ರೂ.669.85 ಕೋಟಿ ಹೆಚ್ಚುವರಿ ನೆರೆ ಪರಿಹಾರ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ. ಬಿ.ಎಸ್. ಯಡಿಯೂರಪ್ಪ ಅವರೇ, ನೆನಪಿರಲಿ ನೀವೇ ಒಪ್ಪಿಕೊಂಡಂತೆ ಅಂದಾಜು ನಷ್ಟ ರೂ. 50 ಸಾವಿರ ಕೋಟಿ, ನೀವು ಕೇಳಿದ್ದು ರೂ.38 ಸಾವಿರ ಕೋಟಿ. ನಿಮ್ಮ ಗೋಗರೆತಕ್ಕೆ ಸಿಕ್ಕಿದ್ದು ಕೇವಲ ರೂ.1869 ಕೋಟಿ. ಇಷ್ಟು ಸಾಕಾ? ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ, ನೀವು ರೂ.38 ಸಾವಿರ ಕೋಟಿ ಪರಿಹಾರ ಕೇಳಿದ್ದು ಆಗಸ್ಟ್ ತಿಂಗಳ ನೆರೆ ಹಾವಳಿಗೆ. ಅಕ್ಟೋಬರ್ ತಿಂಗಳ ಅತಿವೃಷ್ಟಿಯ ನಷ್ಟದ ಸಮೀಕ್ಷೆಯೇ ಪೂರ್ಣಗೊಂಡಿಲ್ಲ. ತಕ್ಷಣ ಅದನ್ನು ಮುಗಿಸಿ ಕೇಂದ್ರಕ್ಕೆ ಹೆಚ್ಚುವರಿ ಪರಿಹಾರದ ಬೇಡಿಕೆ ಸಲ್ಲಿಸಿ ಎಂದು ವ್ಯಂಗ್ಯಭರಿತವಾಗಿ ಟ್ವೀಟ್ ಮಾಡಿದ್ದಾರೆ.













