ಚಿಕ್ಕಬಳ್ಳಾಪುರ : ಕೇರಳದಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರಿಗೆ ಒಂದು ವಾರ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ತಿಳಿಸಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳದಿಂದ ಪ್ರತಿ ದಿನ ಅನೇಕರು ಗಡಿ ಜಿಲ್ಲೆಗಳಿಗೆ ಬರುತ್ತಾರೆ. ಶಿಕ್ಷಣ, ಆರೋಗ್ಯ ಸೇವೆ, ನಿತ್ಯದ ವಹಿವಾಟುಗಳಿಗೆ ದಕ್ಷಿಣ ಕನ್ನಡ, ಉಡುಪಿ ಮೊದಲಾದ ಜಿಲ್ಲೆಗಳಿಗೆ ಜನರು ಬರುತ್ತಾರೆ. ವಿಮಾನ, ರೈಲುಗಳ ಮೂಲಕ ಬರುವವರಿಗೆ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್ ಮಾಡಬೇಕಿದೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಲಾಗುವುದು. ಪ್ರತಿ ದಿನ ಗಡಿ ಜಿಲ್ಲೆಗಳಿಗೆ ಬರುವ ಜನರಿಗೆ ಯಾವ ರೀತಿ ನಿಯಮ ಪಾಲಿಸಬೇಕೆಂದು ಚರ್ಚಿಸಲಾಗುವುದು ಎಂದರು.
ಕೆಜಿಎಫ್ ನ ಶಿಕ್ಷಣ ಸಂಸ್ಥೆಯಲ್ಲಿ 32 ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ತಗುಲಿದೆ. ಈ ಎಲ್ಲ ವಿದ್ಯಾರ್ಥಿಗಳಿಗೆ ಕೇರಳದಿಂದ ಬಂದವರಾಗಿದ್ದಾರೆ. ವಿದ್ಯಾರ್ಥಿಗಳು ಕೇರಳದಿಂದ ಬಂದಾಗಲೇ ಅವರ ನೆಗೆಟಿವ್ ವರದಿ ಪಡೆಯಬೇಕಿತ್ತು. ಇದು ಸಂಸ್ಥೆಯ ಜವಾಬ್ದಾರಿಯೂ ಆಗಿದೆ. ಮಕ್ಕಳಿಗೆ ಶೈಕ್ಷಣಿಕ ಭವಿಷ್ಯ ಹಾಗೂ ಸಂರಕ್ಷಣೆ ಸರ್ಕಾರದ ಜವಾಬ್ದಾರಿ. ಎಲ್ಲಾ ಶಾಲೆಗಳಲ್ಲಿ ವಿಶೇಷ ಮಾರ್ಗಸೂಚಿ ಪಾಲಿಸಲು ಸೂಚಿಸಲಾಗಿದೆ. ಶೇ.2 ಕ್ಕಿಂತ ಹೆಚ್ಚು ಪಾಸಿಟಿವಿಟಿ ಕಂಡುಬಂದರೆ ಶಾಲೆ ಮುಚ್ಚಿ ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದರು.










