ಕೊಟ್ಟಿಗೆಹಾರ : ಸಂಘಟನೆಗಳು ಒಮ್ಮತದಿಂದ ಕಾರ್ಯನಿರ್ವಹಿಸಿದರೆ ಕೆಲಸಗಳು ಸುಗಮವಾಗಿ ನಡೆಸಲು ಸಾಧ್ಯವಾಗುತ್ತದೆ : ಆಲ್ಬರ್ಟ್ ಡಿಸಿಲ್ವ.

363
firstsuddi

ಕೊಟ್ಟಿಗೆಹಾರ : ಯಾವುದೇ ಸಂಘಟನೆಗಳು ಒಮ್ಮತದಿಂದ ಕಾರ್ಯನಿರ್ವಹಿಸಿದರೆ ಕೆಲಸಗಳು ಸುಗಮವಾಗಿ ನಡೆಸಲು ಸಾಧ್ಯವಾಗುತ್ತದೆ ಎಂದು ಬಣಕಲ್ ಬಾಲಿಕಾ ಮರಿಯ ಚರ್ಚಿನ ಧರ್ಮಗುರು ಆಲ್ಬರ್ಟ್ ಡಿಸಿಲ್ವ ಅಭಿಪ್ರಾಯ ಪಟ್ಟರು
ಬಣಕಲ್ ಚರ್ಚ್ ಹಾಲ್‍ನಲ್ಲಿ ನಡೆದ ಬಣಕಲ್ ಕ್ರೈಸ್ತರ ಅಭಿವೃದ್ಧಿ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘದಲ್ಲಿ ಶಿಸ್ತು ಅಳವಡಿಸಿ, ಒಮ್ಮತದಿಂದ ಸರ್ವರ ಸಹಕಾರ ಪಡೆದು ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಶ್ರಮಿಸಬೇಕು. ಸಂಘವು ಸಂಘಟನೆಗೊಂಡು ಉತ್ತಮ ಕೆಲಸಗಳನ್ನು ಮಾಡಿ ಕ್ರೈಸ್ತ ಸಮುದಾಯದ ಅಭಿವೃದ್ದಿಗೆ ಸಹಕರಿಸಬೇಕು ಎಂದರು.
ಮೂಡಿಗೆರೆ ಕ್ರೈಸ್ತರ ಅಭಿವೃದ್ದಿ ಸಂಘದ ಅಧ್ಯಕ್ಷ ಎಂ.ಜೋಸೆಫ್ ಮಾತನಾಡಿ, ಸಂಘಟನೆ ಎಂಬ ವಾಕ್ಯ ಕೇಳಲು ಬಹಳ ಸುಲಭ. ಆದರೆ ಅದರ ಜವಾಬ್ದಾರಿ ಕಷ್ಟಕರವಾದುದು. ಸಂಘಟನೆಯಲ್ಲಿ ಎಡರು ತೊಡರುಗಳು ಸಾಮಾನ್ಯವಾಗಿದ್ದು, ಅವುಗಳನ್ನು ಎದುರಿಸಿ ನಿಂತು ದೈರ್ಯ ಕುಂದದೆ ನಾವು ಸೇವೆ ನೀಡಬೇಕು. ಸದಸ್ಯರ, ಕ್ರೈಸ್ತ ಭಕ್ತಾದಿಗಳ ಸಹಕಾರ ಪಡೆದು ಸಮಾಜದಲ್ಲಿ ಉತ್ತಮ ಕಾರ್ಯನಿರ್ವಹಿಸಿ ಎಂದರು.
ಸಹಾಯಕ ಧರ್ಮಗುರು ಜಾರ್ಜ್ ಮೋನಿಸ್ ಮಾತನಾಡಿ, ಸಂಘಟನೆಗಳು ಅವರಿಗಾಗಿ ಕೆಲಸ ಮಾಡದೇ ಇತರರ ಒಳಿತಿಗೆ ದೃಷ್ಟಿಕೋನ ಇಟ್ಟುಕೊಂಡು ಶ್ರಮಿಸಬೇಕು. ಸಂಘಟನೆಯಲ್ಲಿ ನಾಯಕನ ಪಾತ್ರ ಮುಖ್ಯವಾಗಿದ್ದು ಅವರು ಸಮಾಜಕ್ಕಾಗಿ ಸಮರ್ಥರಾಗಿ ದುಡಿಯಬೇಕು.ಸಮರ್ಥತೆ ಸಂಘವನ್ನು ಮುಂದುವರೆಸಿಕೊಂಡು ಹೋಗಲು ಸಹಾಯಕವಾಗುತ್ತದೆ. ಸಂಘದಲ್ಲಿ ಸಂಪನ್ಮೂಲ ಕ್ರೋಢಿಕರಣವನ್ನು ಮಾಡಿ ಸಂಘದ ಉದ್ದೇಶಗಳನ್ನು ಜವಾಬ್ದಾರಿಯಿಂದ ನಡೆಸಬೇಕು ಎಂದರು.
ನೂತನ ಅಧ್ಯಕ್ಷ ಮೆಲ್ವಿನ್ ಲಸ್ರಾದೊ ಮಾತನಾಡಿ, ಸಂಘದಲ್ಲಿ ಕ್ರೈಸ್ತರ ಒಳಿತಿಗಾಗಿ ಸರಕಾರದಿಂದ ಅಲ್ಪಸಂಖ್ಯಾತರಿಗೆ ಸಿಗುವ ಯೋಜನೆಗಳು, ಸೌಲಭ್ಯಗಳು ನೇರವಾಗಿ ಸಿಗುವಂತೆ ಪ್ರೋತ್ಸಾಹಿಸುವುದು. ಮಕ್ಕಳಿಗೆ ವಿದ್ಯಾರ್ಥಿ ವೇತನ, ಉಚಿತ ಆರೋಗ್ಯ ತಪಾಸಣೆ ಶಿಬಿರಗಳು, ಉಚಿತ ಅಂಬುಲೆನ್ಸ್ ವ್ಯವಸ್ಥೆ ಮತ್ತಿತರ ಪ್ರಯೋಜಕಾರಿ ಕಾರ್ಯಗಳನ್ನು ಸಂಘವು ಮಾಡಲು ಬಯಸಿದ್ದು, ಸರ್ವರ ಸಹಕಾರ ಕೋರಿದರು.
ನಜರೆತ್ ಶಾಲೆಯ ಪ್ರಾಂಶುಪಾಲೆ ಸಿಸ್ಟರ್ ಹಿಲ್ಡಾ ಲೋಬೊ ಮಾತನಾಡಿದರು. ಮಾಜಿ ಕ್ರೈಸ್ತರ ಅಭಿವೃದ್ದಿ ಸಂಘದ ಅಧ್ಯಕ್ಷ ರಿಚರ್ಡ್ ಡೇಸಾ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಮಾಜಿ ಖಜಾಂಚಿ ಆರ್.ಬಿ.ಪಿಂಟೊ, ಕಾರ್ಯದರ್ಶಿ ಡೈನಾ ಫೆರ್ನಾಂಡಿಸ್, ಮೂಡಿಗೆರೆ ಸಂತ ಮಾರ್ಥಾಸ್ ಕಾನ್ವೆಂಟಿನ ಸಿಸ್ಟರ್ ಲಿಡ್ವಿನ್ ರೆಬೆಲ್ಲೊ, ಅರುಣ್ ಪಿಂಟೊ, ವಿನ್ಸೆಂಟ್ ರೋಡ್ರಿಗಸ್, ರೊನಾಲ್ಡ್ ನೊರೊನಾ, ಪ್ಲೇವಿಯಾ ಡಿಸೋಜ, ಮ್ಯೂರಲ್ ರೊಡ್ರಿಗಸ್, ಪ್ರಶಾಂತಿ ಡಿಸೋಜ, ವಿಲ್ಸಿಯಾ ಡಿಮೆಲ್ಲೊ, ವಿನುಷ ಡಿಮೆಲ್ಲೊ, ಒಲಿವಿಯ ಲೋಬೊ, ಬೆನಡಿಕ್ಟ್ ಲೋಬೊ, ಪ್ರಾನ್ಸಿಸ್ ಡಿಸೋಜ, ಮರೀನಾ ಡೇಸಾ ಇದ್ದರು.