ಕೊರೊನಾದಿಂದ ಗುಣಮುಖರಾದವರು ಕ್ಷಯ ರೋಗ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯ : ಸಚಿವ ಸುಧಾಕರ್.

69
firstsuddi

ಬೆಂಗಳೂರು : ಕೊರೊನಾದಿಂದ ಗುಣಮುಖರಾದವರು ಕ್ಷಯ ರೋಗ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸಲಹೆ ನೀಡಿದ್ದಾರೆ.

ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೋವಿಡ್ ಬಂದವರೆಲ್ಲರಿಗೂ ಕ್ಷಯ ರೋಗ ಬರುತ್ತೆ ಎನ್ನುವುದು ಸರಿಯಲ್ಲ, ಕೆಲವರಿಗೆ ಮಾತ್ರ ಬರುವ ಸಾಧ್ಯತೆ ಇದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಇದನ್ನು ಮಾಡಿಸಬೇಕಿದೆ. ಕೋವಿಡ್ ಹಿನ್ನೆಲೆಯಲ್ಲಿ ಕ್ಷಯರೋಗ ಪತ್ತೆ ಆಂದೋಲನ ನಡೆಸಲಾಗುತ್ತಿದೆ. ಕೋವಿಡ್ ಶ್ವಾಸಕೋಶ ಸಂಬಂಧಿತ ರೋಗ, ಕ್ಷಯ ರೋಗ ಸಹ ಅದೇ ಅಂಗಕ್ಕೆ ಸಂಬಂಧಿತ ಖಾಯಿಲೆಯಾಗಿದೆ. ಭವಿಷ್ಯದಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳುವ ಉದ್ದೇಶದಿಂದ ತಪಾಸಣೆ ನಡೆಸಲಾಗುತ್ತಿದೆ.

ದೇಶದಲ್ಲೇ ವಿನೂತನ ಪ್ರಯತ್ನ ಇದಾಗಿದ್ದು, ರಾಜ್ಯ ಸರ್ಕಾರ ಮಾಡುತ್ತಿದೆ. ಆಗಸ್ಟ್ 14ರಿಂದ 30ರ ವರೆಗೂ ಕ್ಷಯ ರೋಗ ತಪಾಸಣೆ ಅಭಿಯಾನ ನಡೆಯಲಿದೆ. ಕೊರೊನಾದಿಂದ 28 ಲಕ್ಷ ಜನ ಗುಣಮುಖರಾಗಿದ್ದಾರೆ, ಕಪ್ಪು ಶಿಲೀಂದ್ರ ಪತ್ತೆ ಮಾಡುವ ತಪಾಸಣೆ ನಡೆಯುತ್ತಿದೆ. ಅದೇ ಮಾದರಿಯಲ್ಲಿ ಕ್ಷಯ ರೋಗ ಪತ್ತೆ ಮಾಡಲಾಗುವುದು. ಕಳೆದ ಐದು ವರ್ಷದಿಂದ ಕ್ಷಯ ರೋಗ ಹೆಚ್ಚಾಗಿದೆ. ಶೇ.33ರಷ್ಟು ಕ್ಷಯ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಆರ್ಥಿಕ ಸ್ಥಿತಿಗತಿಗಳ ಪ್ರಕಾರವೂ ಸರ್ವೇ ಮಾಡಲಾಗಿದ್ದು, ತಪಾಸಣೆ ಮಾಡಲಾಗಿದೆ. ಇದರ ಜೊತೆಯಲ್ಲಿ ಕೋವಿಡ್ ಬಂದವರಲ್ಲೂ ತಪಾಸಣೆ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಮೊದಲ ಬಾರಿಗೆ ಇದನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಮಂಗಳೂರಿನಲ್ಲಿ ಸೋಂಕಿಗೆ ಹೆದರಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ನೋವಿನ ಸಂಗತಿ. ಸೋಂಕು ಬಂದ ಕೂಡಲೇ ಯಾರು ಸಾಯುವುದಿಲ್ಲ. ಈ ಘಟನೆ ವೈಯಕ್ತಿಕವಾಗಿ ನೋವು ತರಿಸಿದೆ. ದಂಪತಿ ಈ ರೀತಿ ಆತ್ಮಹತ್ಯೆ ಮಾಡಿಕೊಂಡಿರೋದು ಸರಿಯಲ್ಲ ಎಂದರು.