ಚಾಮರಾಜನಗರ : ಜಿಲ್ಲೆಯ ಹನೂರು ತಾಲ್ಲೂಕಿನ ರಾಮಾಪುರ ಆರೋಗ್ಯ ಕೇಂದ್ರದ 2.10 ಕೋಟಿ ವೆಚ್ಚದ ಕಾಮಾಗಾರಿಯನ್ನು ಲೋಕಾರ್ಪಣೆಗೊಳಿಸಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್ ಅವರು, ಕೊರೊನಾ ವಿರುದ್ಧದ ಮಹಾಯುದ್ಧದಲ್ಲಿ ತೊಡಗಿಸಿ ಕೊರೊನಾಗೆ ಸೋಲುಣಿಸಿ ಮನುಕುಲ ವಿಜಯ ಕಡೆ ಹೆಜ್ಜೆಹಾಕಬೇಕಿದೆ. ಕೊರೊನಾದ ವಿರುದ್ಧ ಜಯಿಸಬೇಕಾಗಿರುವುದರಿಂದ ಪ್ರತಿಯೊಬ್ಬರೂ ರಾತ್ರಿ ಕರ್ಫ್ಯೂ ಹಾಗೂ ವಾರಾಂತ್ಯ ಕರ್ಫ್ಯೂ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಸಹಕಾರ ನೀಡಬೇಕು ಎಂದು ಮನಿವಿ ಮಾಡಿದರು.
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರಿಗೆ ಅಗತ್ಯ ಚಿಕಿತ್ಸೆ ನೀಡುವ ಸಲುವಾಗಿ ಮೆಡಿಕಲ್ ಕಾಲೇಜಿನ 2 ಅಂತಸ್ತುಗಳನ್ನು ಕೋವಿಡ್ ಚಿಕಿತ್ಸಾ ಕೇಂದ್ರವನ್ನಾಗಿ ಪರಿವರ್ತಿಸಿ ಐಸಿಯು ಸೌಲಭ್ಯವುಳ್ಳ 200 ಹಾಸಿಗೆಗಳನ್ನು ಅಳವಡಿಸಲು ಮತ್ತು ಸೋಂಕಿತರಿಗೆ ಅಗತ್ಯವಾದ ಆಮ್ಲಜನಕ ಪೂರೈಕೆಗೆ ಜಂಬೋ ಸಿಲಿಂಡರ್ ಮತ್ತು ರೆಮಿಡಿಸಿವಿಆರ್ ಔಷಧವನ್ನು ಪೂರೈಸಲು ಕ್ರಮವಹಿಸಲಾಗಿರುವುದಾಗಿ ಹೇಳಿದರು. ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ವೈದ್ಯರು, ವಿವಿಧ ಇಲಾಖಾ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಇವರಿಗೆ ಸಹಕಾರ ನೀಡುವ ಉದ್ದೇಶದಿಂದ ಕೆಲ ಆಯ್ದ ಕೆಲಸಗಳಿಗೆ ಸ್ವಯಂ ಸೇವಕರನ್ನು ನೇಮಕ ಮಾಡಿಕೊಳ್ಳಲು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ್ದು ಆಸಕ್ತರು ಮುಂದೆ ಬಂದು ಸಹಕಾರ ನೀಡಬೇಕು ಎಂದು ಹೇಳಿದರು.
ಕೋವಿಡ್ ಗೆ ತುತ್ತಾಗಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಗುಣಮುಖರಾಗಿ ಹೊರಬರುತ್ತಿದ್ದಂತೆ ಕೋವಿಡ್ ನಿಯಂತ್ರಣ ಕೆಲಸಕ್ಕೆ ಧುಮುಕಿದ್ದು ಆಮ್ಲಜನಕ ಸಮಸ್ಯೆ ನಿವಾರಣೆ ಸಂಬಂಧ ಜನಪ್ರತಿನಿಧಿಗಳು ಮತ್ತು ಹಿರಿಯ ಅಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಕೈಗಾರಿಕೆಗಳಿಗೆ ಪೂರೈಕೆಯಾಗುವ ಆಮ್ಲಜನಕವನ್ನು ತಡೆ ಹಿಡಿದು ಸೋಂಕಿತರ ಚಿಕಿತ್ಸೆಗೆ ಬಳಸಿಕೊಳ್ಳಲು ಸೂಚನೆ ನೀಡಿದ್ದಾರೆ ಎಂದರು. ರಾಜ್ಯದಲ್ಲಿ ಕೋವಿಡ್ ಸೋಂಕಿಗೆ ತುತ್ತಾಗಿ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು ಮರಣ ಪ್ರಮಾಣ ಕೂಡ ಕಡಿಮೆಯಿದೆ ಎಂದು ಮಾಹಿತಿ ನೀಡಿದರು.










