ಕೊರೊನಾ ವೈರಸ್ ಪತ್ತೆ ಮಾಡುವ ಪರಿಕ್ಷಾ ಸೌಲಭ್ಯಗಳನ್ನು ಎಲ್ಲಾ ಸಾರ್ವಜನಿಕರಿಗೆ ಉಚಿತವಾಗಿ ಒದಗಿಸಬೇಕು : ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಸೂಚನೆ…

212
firstsuddi

ನವದೆಹಲಿ : ಮಹಾಮಾರಿ ಕೊರೊನಾ ವೈರಸ್ ಪತ್ತೆ ಮಾಡುವ ಪರಿಕ್ಷಾ ಸೌಲಭ್ಯಗಳನ್ನು ಎಲ್ಲಾ ಸಾರ್ವಜನಿಕರಿಗೆ ಉಚಿತವಾಗಿ ಒದಗಿಸಬೇಕು ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆಯನ್ನು ನೀಡಿದೆ. ಖಾಸಗಿ ಲ್ಯಾಬ್‍ಗಳಲ್ಲಿ ಕೊರೊನಾ ಸೋಂಕು ಪರೀಕ್ಷೆ ನಡೆಸಲು ಹೆಚ್ಚಿನ ಹಣವನ್ನು ಪಡೆಯುತ್ತಿದ್ದು, ಹೀಗಾಗಿ ಈ ಕುರಿತು ಎಲ್ಲರಿಗೂ ಉಚಿತವಾಗಿ ಕೊರೊನಾ ಸೋಂಕು ಪರೀಕ್ಷೆ ನಡೆಸಬೇಕು ಎಂದು ನಿರ್ದೇಶನ ನೀಡುವಂತೆ ಕೋರಿ ವಕೀಲ ಶಶಾಂಕ್ ದಿಯೋ ಅವರು ಸುಪ್ರೀಂ ಕೋರ್ಟ್‍ಗೆ ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾ. ಅಶೋಕ್ ಭೂಷಣ್ ನೇತೃತ್ವದ ದ್ವಿ ಸದಸ್ಯ ಪೀಠ ಕೊರೊನಾ ವೈರಸ್ ಪತ್ತೆ ಪರೀಕ್ಷೆಗಾಗಿ ಖಾಸಗಿ ಲ್ಯಾಬ್‍ಗಳು ಹೆಚ್ಚಿನ ದರವನ್ನು ಪಡೆಯುತ್ತಿದೆ. ಹೀಗಾಗಿ ಈ ಸೌಲಭ್ಯಗಳನ್ನು ಉಚಿತಗೊಳಿಸುವ ನಿಟ್ಟಿನಲ್ಲಿ ಯಾವ ಕ್ರಮ ಕೈಗೊಳ್ಳಬಹುದು ಎಂಬುವುದರ ಕುರಿತು ಚಿಂತಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಈ ಕುರಿತಂತೆ ಉತ್ತರಿಸಿದ ಕೇಂದ್ರ ಸರ್ಕಾರದ ಪರ ವಕೀಲರಾದ ಸಾಲಿಸಿಟರ್ ತುಷಾರ್ ಮೆಹ್ತಾ ಅವರು, ದೇಶದ ಒಟ್ಟು 118 ಸರ್ಕಾರಿ ಲ್ಯಾಬ್‍ಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಆದರೆ ಇದು ಸಾಲುತ್ತಿಲ್ಲ. ಹೀಗಾಗಿ 47 ಖಾಸಗಿ ಲ್ಯಾಬ್‍ಗಳಿಗೆ ಪರವಾನಗಿಯನ್ನು ನೀಡಲಾಗಿದೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ, ಖಾಸಗಿ ಲ್ಯಾಬ್‍ಗಳಲ್ಲಿ ಪರೀಕ್ಷೆ ನಡೆಸಲು ಅವಕಾಶ ಕಲ್ಪಿಸಲಾಗಿದೆ ಎಂದು ವಿವರಿಸಿದರು.