ಕೊರೊನಾ ಸೋಂಕಿನ ಬಗ್ಗೆ ನಿರ್ಲಕ್ಷ-ಗಾಯಕಿ ಕನ್ನಿಕಾ ಕಪೂರ್ ವಿರುದ್ಧ ಎಫ್‍ಐಆರ್ ದಾಖಲು…

227
firstsuddi

ನವದೆಹಲಿ : ಕೊರೊನಾ ಸೋಂಕುವಿನ ಬಗ್ಗೆ ನಿರ್ಲಕ್ಷ ತೋರಿರುವ ಆರೋಪದ ಮೇಲೆ ಬಾಲಿವುಡ್ ಗಾಯಕಿ ಕನ್ನಿಕಾ ಕಪೂರ್ ವಿರುದ್ಧ ಲಕ್ನೋ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಮಾರ್ಚ್ 15ರಂದು ಲಂಡನ್‍ನಿಂದ ಭಾರತಕ್ಕೆ ವಾಪಸ್ಸಾಗಿದ್ದ ಕನ್ನಿಕಾ ಕಪೂರ್ ಅವರಿಗೆ ಕೊರೊನಾ ವೈರಸ್ ತಗುಲಿರುವುದಾಗಿ ದೃಢಪಟ್ಟಿತ್ತು. ಇದಕ್ಕೂ ಮೊದಲು ಕನ್ನಿಕಾ ಕಪೂರ್ ಅವರು ವಿಐಪಿಗಳನ್ನು ಸೇರಿಸಿಕೊಂಡು ಪಾರ್ಟಿಯನ್ನು ಆಯೋಜಿಸಿದ್ದರು. ಹೀಗಾಗಿ ಪಾರ್ಟಿಯಲ್ಲಿ ಭಾಗಿಯಾದವರಿಗೂ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಅವರ ಸಂಪರ್ಕದಲ್ಲಿದ್ದವರ ಮಾಹಿತಿ ತಿಳಿಯಲು ಆರೋಗ್ಯ ಇಲಾಖೆ ಶ್ರಮವಹಿಸುತ್ತಿದೆ. ಅಲ್ಲದೇ ಕನ್ನಿಕಾ ಕಪೂರ್ ಅವರಿಗೆ ಸೋಂಕು ತಗುಲಿರುವುದು ದೃಢವಾಗುತ್ತಿದ್ದಂತೆ ಅವರನ್ನು ಕಿಂಗ್ ಜಾರ್ಜ್ ಮೆಡಿಕಲ್ ವಿಶ್ವವಿದ್ಯಾಲಯದ ಪ್ರತ್ಯೇಕ ವಾರ್ಡ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಮುಖ್ಯ ವೈದ್ಯಕೀಯ ಅಧಿಕಾರಿಯೊಬ್ಬರು ಕನ್ನಿಕಾ ಕಪೂರ್ ಅವರು ಸೋಂಕಿನ ಬಗ್ಗೆ ನಿರ್ಲಕ್ಷ ತೋರುತ್ತಿದ್ದಾರೆ ಎಂದು ದೂರನ್ನು ನೀಡಿದ್ದು, ಈ ದೂರಿನ ಅನ್ವಯ ಲಕ್ನೋ ಸರೋಜಿನಿ ನಗರ ಠಾಣಾ ಪೊಲೀಸರು ಕನ್ನಿಕಾ ಕಪೂರ್ ಅವರ ವಿರುದ್ಧ ಐಪಿಸಿ ಸೆಕ್ಷನ್ 188, 269, 270 ರ ಅಡಿಯಲ್ಲಿ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.