ಕೊರೋನಾ ಸೋಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಗೆ ಆಗಮಿಸುವ ಪ್ರವಾಸಿಗರನ್ನು ನಿರ್ಬಂಧಿಸುವಂತೆ ಒತ್ತಾಯ…

81
firstsuddi

ಚಿಕ್ಕಮಗಳೂರು: ಕೊರೋನಾ ಸೋಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಗೆ ಆಗಮಿಸುವ ಪ್ರವಾಸಿಗರನ್ನು ನಿರ್ಬಂಧಿಸುವಂತೆ ರೋಟರಿ ಕಾಫಿ ಲ್ಯಾಂಡ್ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದೆ.

ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ, ಕನಕರಡ್ಡಿ ಮತ್ತು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಡಾ.ವಿಕ್ರಮ್ ಅಮಟೆ ಅವರನ್ನು ನಿನ್ನೆ ಭೇಟಿ ಮಾಡಿದ ರೋಟರಿ ಕಾಫಿ ಲ್ಯಾಂಡ್ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.

ಕೊರೋನಾ ಮಹಾಮಾರಿಯಿಂದಾಗಿ ಕಳೆದ ಮೂರು ಬಾರಿ ದೇಶ ಮತ್ತು ರಾಜ್ಯದಲ್ಲಿ ಲಕ್ಷಾಂತರ ಜನ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲೂ ಸಹಸ್ರಾರು ಸಂಖ್ಯೆಯಲ್ಲಿ ನಾವು ನೋವುಗಳಾಗಿದ್ದು, ಅನೇಕರು ಹೆತ್ತವರನ್ನು ಕಳೆದುಕೊಂಡು ಅನಾಥರಾಗಿದ್ದಾರೆ ಎಂದು ಹೇಳಿದರು.

ಕೊರೋನಾ ಮಹಾಮಾರಿ ಇದೀಗ ಮತ್ತೊಮ್ಮೆ ಕೇರಳದಲ್ಲಿ ಕಾಣಿಸಿಕೊಂಡಿದ್ದು, ಅದು ವ್ಯಾಪಕವಾಗಿ ಹರಡಿ ಸಾವು ನೋವುಗಳಾಗುವ ಮುನ್ನ ಜಿಲ್ಲಾಡಳಿತ ಈಗಲೇ ಎಚ್ಚೆತ್ತುಕೊಂಡು ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಜಿಲ್ಲೆಗೆ ಆಗಮಿಸುವ ಪ್ರವಾಸಿಗರನ್ನು ವಿಶೇಷವಾಗಿ ಕೇರಳದ ಪ್ರವಾಸಿಗರನ್ನು ಜಿಲ್ಲೆಗೆ ಬಾರದಂತೆ ತಡೆಗಟ್ಟಬೇಕು ಎಂದು ತಿಳಿಸಿದರು.

ಕ್ರಿಸ್ಮಸ್ ಮತ್ತು ನೂತನ ವರ್ಷದ ಹಿನ್ನೆಲೆಯಲ್ಲಿ ಸಾಲು ಸಾಲು ರಜೆ ಬರುವುದರಿಂದ ಜಿಲ್ಲೆಯಲ್ಲಿ ಪ್ರವಾಸಿಗರ ಸಂಖ್ಯೆ ವ್ಯಾಪಕವಾಗಿ ಹೆಚ್ಚಾಗಲಿದೆ. ಅದು ಕೊರೋನಾ ಸೋಂಕು ಹರಡಲು ಕಾರಣವಾಗಲಿದ್ದು, ಹಾಗಾಗಿ ಪ್ರವಾಸಿಗರ ಮೇಲೆ ನಿರ್ಬಂಧ ಹೇರಬೇಕು. ಹೊರರಾಜ್ಯಗಳಿಗೆ ತೆರಳಿ ಹಿಂತಿರುಗುವ ಜಿಲ್ಲೆಯ ಜನರನ್ನು ತೀವ್ರ ತಪಾಸಣೆಗೊಳಪಡಿಸಬೇಕು ಎಂದು ಸಲಹೆ ಮಾಡಿದರು.

ಜಿಲ್ಲೆಯಲ್ಲಿರುವ ರೆಸಾರ್ಟ್‍ಗಳು ಹೋಂ ಸ್ಟೇಗಳು ಮತ್ತು ಲಾಡ್ಜ್‍ಗಳಿಗೆ ಕಟ್ಟುನಿಟ್ಟಿನ ಮಾರ್ಗಸೂಚಿ ನೀಡಬೇಕು. ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚಿಸಬೇಕು ಎಂದರು.

ರೋಟರಿ ಕಾಫಿ ಲ್ಯಾಂಡ್ ಅಧ್ಯಕ್ಷ ತನೋಜ್‍ಕುಮಾರ್ ನಾಯ್ಡು, ಕಾರ್ಯದರ್ಶಿ ನಾಗೇಶ್ ಕೆಂಜಿಗೆ, ನಿರ್ದೇಶಕರಾದ ಎಂ.ಆನಂದ್, ರವೀಂದ್ರನಾಥನಾಯ್ಡು, ವಿವೇಕ್, ರಾಘವೇಂದ್ರ, ಚಂದ್ರಶೇಖರ್, ಶಾಂತರಾಮ್ ಶೆಟ್ಟಿ ಹಾಜರಿದ್ದರು.