ಭುವನೇಶ್ವರ: ಕೊಹಿನೂರ್ ವಜ್ರವು ಒಡಿಶಾದ ಪುರಿ ಜಗನ್ನಾಥ ದೇವರಿಗೆ ಸೇರಿದ್ದು, ಅದನ್ನ ವಾಪಸ್ ತರಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಧ್ಯಸ್ಥಿಕೆ ವಹಿಸಬೇಕೆಂದು ಒಡಿಶಾದ ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆ ಮನವಿ ಮಾಡಿದೆ.
ರಾಣಿ ಎಲಿಜಬೆತ್ ನಿಧನದ ಬೆನ್ನಲ್ಲೇ ಅವರ ಹಿರಿಯ ಪುತ್ರ ಪ್ರಿನ್ಸ್ ಚಾರ್ಲ್ಸ್ ಬ್ರಿಟನ್ ರಾಜನಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇದೀಗ 105 ಕ್ಯಾರೆಟ್ ವಜ್ರದ ಕೀರಿಟವನ್ನು ಅವರ ಪತ್ನಿ ಕಾರ್ನೆವಾಲ್ ಧರಿಸಲಿದ್ದಾರೆ. ಆದರೆ, ಈ ವಜ್ರವನ್ನು ಭಾರತಕ್ಕೆ ವಾಪಸ್ ತರಲು ಸಹಾಯ ಮಾಡುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆಯಲಾಗಿದೆ. ಕೊಹಿನೂರ್ ವಜ್ರವು ಶ್ರೀ ಜಗನ್ನಾಥ ಭಾಗ್ಬನ್ ಅವರದ್ದು. ಅದು ಈಗ ಇಂಗ್ಲೆಂಡ್ ರಾಣಿ ಬಳಿ ಇದೆ. ಮಹಾರಾಜ ರಂಜಿತ್ ಸಿಂಗ್ ಅವರು ತಮ್ಮ ಇಚ್ಛೆಯ ಮೇರೆಗೆ ಅದನ್ನು ಜಗನ್ನಾಥ ದೇವರಿಗೆ ದಾನ ಮಾಡಿದಂತೆ, ಅದನ್ನು ಭಾರತಕ್ಕೆ ತರಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಪ್ರಧಾನಿಯವರಲ್ಲೂ ವಿನಂತಿಸುತ್ತೇವೆ ಎಂದು ಕೋರಿದೆ.
ಪಂಜಾಬ್ ನ ಮಹಾರಾಜ ರಂಜಿತ್ ಸಿಂಗ್ ಅವರು ಅಫ್ಘಾನಿಸ್ತಾನದ ನಾದಿರ್ ಶಾ ವಿರುದ್ಧದ ಯುದ್ಧದಲ್ಲಿ ಗೆದ್ದ ನಂತರ ಜಗನ್ನಾಥ ದೇಗುಲಕ್ಕೆ ಈ ವಜ್ರ ದಾನವಾಗಿ ನೀಡಿದ್ದರು. 1839ರಲ್ಲಿ ರಂಜಿತ್ ಸಿಂಗ್ ನಿಧನರಾದರು. ಇದಾದ 10 ವರ್ಷಗಳ ಬಳಿಕ ಅವರ ಮಗ ದುಲೀಪ್ ಸಿಂಗ್ ನಿಂದ ಬ್ರಿಟಿಷರು ಕೊಹಿನೂರ್ ವಜ್ರ ಕಿತ್ತುಕೊಂಡಿದ್ದರು.










