ನವದೆಹಲಿ : ಕೇಂದ್ರ ಸರ್ಕಾರ ಹೆಚ್ಚುವರಿ ಆರ್ಡರ್ ನೀಡದಿದ್ದರೆ ಮುಂದಿನ ವಾರದಿಂದಲೇ ಕೋವಿಶೀಲ್ಡ್ ಲಸಿಕೆ ಉತ್ಪಾದನೆಯನ್ನು ಶೇ.50 ರಷ್ಟು ಕಡಿತಗೊಳಿಸಲು ನಿರ್ಧರಿಸಿರುವುದಾಗಿ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯ ಸಿಇಒ ಅದಾರ್ ಪೂನಾವಾಲಾ ಹೇಳಿದ್ದಾರೆ.
ಈ ಬಗ್ಗೆ ರಾಷ್ಟ್ರೀಯ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ನಾನು ಸದ್ಯಕ್ಕೆ ಗೊಂದಲದಲ್ಲಿ ಇದ್ದೇನೆ. ತಿಂಗಳಿಗೆ ನಾವು 250 ಮಿಲಿಯನ್ ಡೋಸ್ಗಳಷ್ಟು ಲಸಿಕೆ ಉತ್ಪಾದನೆ ಮಾಡುತ್ತಿದ್ದೇವೆ. ಇಲ್ಲಿಯವರೆಗೆ ಕೇಂದ್ರ ಆರೋಗ್ಯ ಸಚಿವಾಲಯ ಇಟ್ಟಷ್ಟು ಪ್ರಮಾಣದ ಬೇಡಿಕೆಯನ್ನು ಪೂರೈಸಿದ್ದೇವೆ. ಇದೀಗ ದೇಶದಲ್ಲಿ ಶೇ.50ಕ್ಕೂ ಹೆಚ್ಚು ಜನರಿಗೆ ಎರಡೂ ಡೋಸ್ ಕೊವಿಡ್ 19 ಲಸಿಕೆ ನೀಡಿ ಮುಗಿದಿದೆ. ಹೀಗಾಗಿ ಹೊಸದಾಗಿ ಆರ್ಡರ್ ಏನೂ ಬಂದಿಲ್ಲ. ನಾವೂ ಕೂಡ ಉತ್ಪಾದನೆ ಪ್ರಮಾಣ ತಗ್ಗಿಸಲು ನಿರ್ಧರಿಸಿದ್ದೇವೆ. 20-30 ಮಿಲಿಯನ್ ಡೋಸ್ ಸ್ಪುಟ್ನಿಕ್ ಲೈಟ್ ಲಸಿಕೆಯನ್ನು ಸಂಗ್ರಹಿಸುವುದಾಗಿ ಕೇಂದ್ರ ಹೇಳಿದೆ. ನಾವು ಪರವಾನಗಿ ಪಡೆದ ತಕ್ಷಣ, ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆಯನ್ನು ಉತ್ಪಾದಿಸಬಹುದು ಎಂದು ಪೂನಾವಾಲಾ ಹೇಳಿದ್ದಾರೆ.










