ಚಿಕ್ಕಮಗಳೂರು – ಸರ್ಕಾರ ಮತ್ತು ಸಂಘ ಸಂಸ್ಥೆಗಳಿಂದ ಶಿಕ್ಷಣಕ್ಕಾಗಿ ದೊರೆಯುವ ಸವಲತ್ತುಗಳನ್ನು ಮಕ್ಕಳು ಸಮರ್ಪಕವಾಗಿ ಬಳಸಿಕೊಂಡು ವಿದ್ಯಾವಂತರಾಗಿ ಹೊರಹೊಮ್ಮಬೇಕು ಎಂದು ಜಿಲ್ಲಾ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಡಿ.ಎಲ್.ಶಂಕರನಾಥ್ ಸಲಹೆ ಮಾಡಿದರು.
ನಗರದ ಮೊಗವೀರ ಮಹಾಜನ ಸಂಘದ ಕಛೇರಿಯಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಉಡುಪಿಯ ಡಾ|| ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‍ನಿಂದ ನೀಡಲಾದ ಉಚಿತ ನೋಟ್ ಪುಸ್ತಕಗಳನ್ನು ಸಮುದಾಯದ ವಿದ್ಯಾರ್ಥಿಗಳಿಗೆ ವಿತರಿಸಿ ಅವರು ಮಾತನಾಡಿದರು.
ಬಹಳಷ್ಟು ವರ್ಷಗಳ ಹಿಂದೆ ಬಡವರು ಮತ್ತು ಗ್ರಾಮೀಣ ಪ್ರದೇಶಗಳ ಮಕ್ಕಳಿಗೆ ಶಿಕ್ಷಣ ಮರೀಚಿಕೆಯಾಗಿತ್ತು, ಮೈಲಿಗಟ್ಟಲೆ ನಡೆದು ಅವರಿವರ ಮನೆಯಲ್ಲಿ ವಾರಾನ್ನದೂಟ ಮಾಡಿ ವಿದ್ಯಾಭ್ಯಾಸ ಮಾಡಬೇಕಾಗಿತ್ತು, ದುಬಾರಿ ಶುಲ್ಕವನ್ನು ಭರಿಸಲಾಗದೇ ಬಹಳಷ್ಟು ವಿದ್ಯಾರ್ಥಿಗಳು ಶಿಕ್ಷಣವನ್ನು ತ್ಯಜಿಸುತ್ತಿದ್ದರು ಎಂದರು.
ಆದರೆ ಇತ್ತೀಚಿನ ವರ್ಷಗಳಲ್ಲಿ ಸರ್ಕಾರಗಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿವೆ, ಕೋಟ್ಯಾಂತರ ರೂ ವ್ಯಯಿಸಿ ಪಠ್ಯಪುಸ್ತಕ, ಸೈಕಲ್, ಸಮವಸ್ತ್ರ, ಶೂ, ಸಾಕ್ಸ್, ಊಟ ಸೇರಿದಂತೆ ಅನೇಕ ಸವಲತ್ತುಗಳನ್ನು ಒದಗಿಸುವುದರ ಜೊತೆಗೆ ಉಚಿತ ಶಿಕ್ಷಣವನ್ನೂ ನೀಡುತ್ತಿವೆ, ಸಂಘ ಸಂಸ್ಥೆಗಳೂ ಸಹ ವಿದ್ಯಾರ್ಥಿಗಳಿಗೆ ಬಹಳಷ್ಟು ಸೌಲಭ್ಯಗಳನ್ನು ಒದಗಿಸುತ್ತಿವೆ ಎಂದು ಹೇಳಿದರು.
ಬಡವಿದ್ಯಾರ್ಥಿಗಳು ಈ ಸವಲತ್ತುಗಳನ್ನು ಸದ್ಭಳಕೆ ಮಾಡಿ ಕೊಳ್ಳಬೇಕು, ಶ್ರದ್ದೆಯಿಂದ ವಿದ್ಯಾರ್ಜನೆ ಮಾಡಿ ಶಿಕ್ಷಣವಂತರಾಗಿ ಹೊರಹೊಮ್ಮಬೇಕು ಎಂದು ಕಿವಿಮಾತು ಹೇಳಿದರು.
ಸಂಘದ ಮಾಜಿ ಅಧ್ಯಕ್ಷ ಕೆ.ರಾಮಣ್ಣ ಮಾತನಾಡಿ ಬಡವರು ಮತ್ತು ತಳ ಸಮುದಾಯದವರು ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಆ ವರ್ಗಗಳ ಮಕ್ಕಳು ಶಿಕ್ಷಣವಂತರಾಗಬೇಕು ಎಂದರು.
ಶಿಕ್ಷಣವಂತರಾಗುವುದರಿಂದ ಸಮಾಜದಲ್ಲಿ ಸ್ಥಾನ ಮಾನ ಗೌರವ ದೊರೆಯುತ್ತದೆ ಬಡತವನ್ನು ಹೋಗಲಾಡಿಸಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದ ಅವರು ಸಮುದಾಯದ ಮಕ್ಕಳು ಇದನ್ನು ಅರಿತು ಎಷ್ಟೇ ಕಷ್ಟವಾದರೂ ಬಿಡದೇ ವಿದ್ಯಾವಂತರಾಗಬೇಕು ಎಂದು ಕಿವಿಮಾತು ಹೇಳಿದರು.
ಸಮುದಾಯದ ನೂರು ಬಡ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಯಿತು, ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಸುರೇಶ್, ಕಾರ್ಯದರ್ಶಿ ಕೃಷ್ಣ ಕಾಂಚನ್, ಖಜಾಂಚಿ ಎಸ್.ಸಂತೋಷ್, ಗಣೇಶ್ ಸಂಜೀವ ಉಪಸ್ಥಿತರಿದ್ದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು – ಸರ್ಕಾರ ಮತ್ತು ಸಂಘ ಸಂಸ್ಥೆಗಳಿಂದ ಶಿಕ್ಷಣಕ್ಕಾಗಿ ದೊರೆಯುವ ಸವಲತ್ತುಗಳನ್ನು ಮಕ್ಕಳು ಸಮರ್ಪಕವಾಗಿ ಬಳಸಿಕೊಂಡು...










