ಕ್ರಿಸ್ಮಸ್ ಆಚರಣೆಯ ಸಂಭ್ರಮದಲ್ಲಿದ್ದ ಕ್ರಿಶ್ಚಿಯನ್ ಸಮುದಾಯದ ಮನೆಗಳಿಗೆ ಬೆಂಕಿ.

74

ಢಾಕಾ: ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರ ಬಂದ ನಂತರ ಅಲ್ಪಸಂಖ್ಯಾತರ ಮೇಲೆ ದಾಳಿ ಹೆಚ್ಚುತ್ತಲೇ ಬಂದಿವೆ. ಹಿಂದೂ ದೇಗುಲಗಳ ಮೇಲಿನ ದಾಳಿ ನಂತರ ಇದೀಗ ಚಿತ್ತಗಾಂಗ್ ಪ್ರದೇಶದಲ್ಲಿ ಕ್ರಿಸ್ಮಸ್ ಆಚರಣೆಯ ಸಂಭ್ರಮದ ವೇಳೆ ಕ್ರಿಶ್ಚಿಯನ್ ಸಮುದಾಯದ 19 ಮನೆಗಳಿಗೆ ಬೆಂಕಿ ಹಚ್ಚಿದ ಘಟನೆ ತಿಳಿದುಬಂದಿದೆ. ಬಂದರ್ಬನ್ ಜಿಲ್ಲೆಯ ನೋಟುನ್ ತೊಂಗ್‍ಹಿರಿ ತ್ರಿಪುರಾ ಪರಾ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ ಎಂದು ಮಾಹಿತಿ ತಿಳಿಸಲಾಗಿದೆ. 17 ಮನೆಗಳು ಸಂಪೂರ್ಣ ಸುಟ್ಟು ನೆಲ ಸಮವಾಗಿದ್ದು, 2 ಮನೆಗಳು ಅರ್ಧದಷ್ಟು ಸುಟ್ಟು ಹೋಗಿವೆ ಎಂದು ತಿಳಿಸಲಾಗಿದೆ. ಈ ಬಗ್ಗೆ ಬಾಂಗ್ಲಾ ಸರ್ಕಾರ ಒಂದೇ ಸಮುದಾಯದ ಎರಡು ಗುಂಪುಗಳ ನಡುವಿನ ವೈಷಮ್ಯವೇ ಇದಕ್ಕೆ ಕಾರಣ ಎಂದು ಹೇಳಿದೆ. ಕ್ರಿಸ್ಮಸ್ ಹಿನ್ನೆಲೆಯಲ್ಲಿ ಸಾಮೂಹಿಕ ಪ್ರಾರ್ಥನೆಗೆಂದು ಚರ್ಚ್‍ಗೆ ಹೋಗಿದ್ದಾಗ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ ಎಂದು ಜನರು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮುದಾಯದ ಮುಖಂಡರ ದೂರು ಆಧರಿಸಿ ಎಫ್‍ಐಆರ್ ದಾಖಲಿಸಿದ್ದು, ಈಗಾಗಲೇ ನಾಲ್ಕು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ತಿಳಿಸಿದ್ದಾರೆ.