ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಬರ್ಬರ ಹತ್ಯೆ – ಅಪ್ಪ, ಮಗ ಅರೆಸ್ಟ್…

85
firstsuddi

ಮಂಗಳೂರು : ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಕಾರ್ ಸ್ಟ್ರೀಟ್ ನಲ್ಲಿ ನಡೆದಿದ್ದು, ಘಟನೆ ಸಂಬಂಧ ಆರೋಪಿಗಳನ್ನು ಬಂದರು ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿನಾಯಕ್ ಕಾಮತ್(44) ಕೊಲೆಯಾದ ವ್ಯಕ್ತಿ. ಈತನನ್ನು ಕೃಷ್ಣಾನಂದ ಕಿಣಿ ಮತ್ತು ಅವರ ಮಗ ಅವಿನಾಶ ಕಿಣಿ ಹತ್ಯೆ ಮಾಡಿದ್ದಾರೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮಂಗಳೂರಿನ ಕಾರ್ ಸ್ಟ್ರೀಟ್ ರಸ್ತೆಯ ವೀರ ವೆಂಕಟೇಶ ಅಪಾರ್ಟ್ಮೆಂಟ್ ಮುಂಭಾಗದ ಗೇಟ್ ಬಳಿ ನಾಲ್ಕೈದು ದಿನಗಳ ಹಿಂದೆ ಸಿಮೆಂಟ್ ಹಾಕಿ ಸರಿಪಡಿಸಿದ್ದರು. ಇದರ ಮೇಲೆ ಕಾರು ಹೋಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಅಪಾರ್ಟ್ಮೆಂಟ್ ನ ಕೃಷ್ಣಾನಂದ ಕಿಣಿ ಅವರು ವಿನಾಯಕ ಕಾಮತ್ ಜೊತೆಗೆ ಗಲಾಟೆ ಮಾಡಿಕೊಂಡಿದ್ದಾರೆ. ನಿನ್ನೆ ರಾತ್ರಿ ದೀಪಾವಳಿ ಪಟಾಕಿ ಸಿಡಿಸುತ್ತಿದ್ದ ವೇಳೆ ಪಾರ್ಕಿಂಗ್ ಸ್ಥಳದಲ್ಲಿ ಮತ್ತೇ ಇಬ್ಬರ ನಡುವೆ ಗಲಾಟೆ ನಡೆದಿದೆ. ಈ ವೇಳೆ ಕೃಷ್ಣಾನಂದ ಕಿಣಿ ಮತ್ತು ಅವರ ಮಗ ಅವಿನಾಶ ಕಿಣಿ, ವಿನಾಯಕ ಕಾಮತ್ ಅವರ ಎದೆಗೆ ಚೂರಿಯಿಂದ ಇರಿದಿದ್ದಾರೆ. ಗಂಭೀರ ಗಾಯಗೊಂಡಿದ್ದ ವಿನಾಯಕ ಕಾಮತ್ ನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದು, ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ.

ಘಟನೆ ಸಂಬಂಧ ವಿನಾಯಕ ಕಾಮತ್ ಪತ್ನಿ ದೂರು ನೀಡಿದ್ದರು. ದೂರಿನ ಮೇರೆಗೆ ಕೃಷ್ಣಾನಂದ ಕಿಣಿ ಮತ್ತು ಅವರ ಮಗ ಅವಿನಾಶ ಕಿಣಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.