ತಮಿಳಿನ ಖ್ಯಾತ ನಿರ್ದೇಶಕ ಹಾಗೂ ನಟ ಮನೋಬಾಲ ಇಂದು ನಿಧನರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು.
ನಟ ಮನೋಬಾಲ ಅವರು ತೀವ್ರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಚೆನ್ನೈನಲ್ಲಿ ಕೊನೆಯುಸಿರೆಳೆದಿದ್ದಾರೆ. ಕೆಲ ದಿನಗಳಿಂದ ಅವರು ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿದ್ದರು.
ನಟ ಮನೋಬಾಲ ಅವರು ಸುಮಾರು 3 ವರ್ಷಗಳ ವೃತ್ತಿ ಜೀವನದಲ್ಲಿ 450ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಪತ್ನಿ ಉಷಾ ಮತ್ತು ಪುತ್ರ ಹರೀಶ್ ಅವರನ್ನು ಅಗಲಿದ್ದಾರೆ. ಕುಟುಂಬಸ್ಥರು, ಚಿತ್ರರಂಗದವರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.
ಸಾಹಸ ಸಿಂಹ ವಿಷ್ಣುವರ್ಧನ್ ಅವರ ಡಿಸೆಂಬರ್ 31 ಸಿನಿಮಾಗೆ ಮನೋಬಾಲ ನಿರ್ದೇಶನ ಮಾಡಿದ್ದಾರೆ. ಹಾಗಾಗಿ ಕನ್ನಡದ ನಂಟು ಕೂಡ ಅವರಿಗಿತ್ತು. ಮನೋಬಾಲ ಅವರು 1979 ರಲ್ಲಿ ಭಾರತಿರಾಜ ಅವರ ‘ಪುತಿಯ ವಾರ್ಪುಗಳ್’ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ವರದಿಯ ಪ್ರಕಾರ ಮನೋಬಾಲ ಅವರು ಭಾರತಿರಾಜ ಅವರ ಜೊತೆ ಸಹಾಯಕ ನಿರ್ದೇಶಕರಾಗಿ ಸೇರಿಕೊಂಡರು. ಅನೇಕ ಸಿನಿಮಾಗಳಲ್ಲಿ ನಟಿಸಿರುವ ಮನೋಬಾಲ, ಕೊನೆಯದಾಗಿ ಕಾಜಲ್ ಅಗರ್ವಾಲ್ ಅವರ ಘೋಸ್ಟಿಯಲ್ಲಿ ನಟಿಸಿದ್ದರು. ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾದಲ್ಲಿ ಹಾಸ್ಯ ಕಲಾವಿದರಾಗಿ ಗುರುತಿಸಿಕೊಂಡಿದ್ದರು.










