ಗಂಡನ ಕುಡಿತದ ಚಟ ಹೋಗಲಿ, ನಾನು ಇಷ್ಟಪಟ್ಟಿರುವ ಹುಡುಗನ ಜೊತೆ ಮದುವೆ ಮಾಡು – ಹಾಸನಾಂಬೆಗೆ ಭಕ್ತರ ಕೋರಿಕೆ ಪತ್ರ!

90
firstsuddi

ಹಾಸನ : ಅ.28 ರಿಂದ 10 ದಿನಗಳ ಕಾಲ ಹಾಸನಾಂಬೆಯ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಪ್ರತಿ ವರ್ಷದಂತೆ ಈ ಬಾರಿಯೂ ಅನೇಕ ಪತ್ರಗಳು ಬಂದಿದ್ದು ಕುತೂಹಲ ಕೆರಳಿಸಿವೆ.

ಗಂಡನ ಕುಡಿತದ ಚಟ ಹೋಗಲಿ, ನನ್ನ ಮಗ ಶೇ 90ಕ್ಕೂ ಅಧಿಕ ಅಂಕಗಳನ್ನು ಪಡೆಯಲಿ, ನಮ್ಮ ಮನೆಯ ಮುಂದೆ ರಸ್ತೆ ಗುಂಡಿ ಬಿದ್ದಿದೆ, ಅದು ಬೇಗ ಸರಿಯಾಗಲಿ, ವರ್ಷದೊಳಗೆ ನನ್ನ ಮಗಳ ಮದುವೆಯಾದರೆ ನಿನಗೆ ಕಾಣಿಕೆ ಅರ್ಪಿಸುತ್ತೇನೆ, ನನಗೆ ಕೊಳ್ಳೇಗಾಲದ ಹುಡುಗ ಗಂಡನಾಗಿ ಬರಲಿ, ನಾನು ಇಷ್ಟಪಟ್ಟಿರುವ ಹುಡುಗನ ಜೊತೆ ಮದುವೆ ಮಾಡು ಎಂದು ಯುವತಿ ರಕ್ತದಲ್ಲಿ ಪತ್ರ ಬರೆದಿದ್ದಾಳೆ.

ನಿನ್ನ ಕೃಪೆಯಿಂದ ಹೊಳೆನರಸೀಪುರದ ಎಂಎಲ್ಎ ಬದಲಾಗಬೇಕು. ಹೆಚ್.ಡಿ ರೇವಣ್ಣ ಕುಟುಂಬದ ಸದಸ್ಯರು ಜನರ ಪ್ರಾಣ ಹಿಂಡುತ್ತಿದ್ದಾರೆ. ಅವರ ಕುಟುಂಬದವರನ್ನೆಲ್ಲಾ ಸೋಲಿಸಿಬಿಡು ತಾಯಿ. ಎಂದು ಬರೆಯಲಾಗಿದೆ. ಇದರ ಜೊತೆಗೆ ಭೂವ್ಯಾಜ್ಯಗಳಿಗಾಗಿ ಗ್ರಾಮೀಣ ಭಾಗದ ರೈತರು ನ್ಯಾಯಾಲಯಕ್ಕೆ ಅಲೆದಾಡುತ್ತಿರುವ ಸಂಕಷ್ಟ ನೋಡಲಾಗುತ್ತಿಲ್ಲ, ಅದಕ್ಕೆ ಪರಿಹಾರ ನೀಡು ಎಂದು ಭಕ್ತರೊಬ್ಬರು ಬೇಡಿಕೊಂಡಿದ್ದಾರೆ. ಇಂದು ಹುಂಡಿ ಎಣಿಕೆಯ ಕಾರ್ಯ ನಡೆಯುತ್ತಿದ್ದು, ಹುಂಡಿಯಲ್ಲಿ ಕಾಣಿಕೆಯೊಂದಿಗೆ ಹಲವಾರು ಕೋರಿಕೆಯ ಪತ್ರಗಳು ಲಭ್ಯವಾಗಿವೆ. ಈ ಪತ್ರಗಳು ಇದೀಗ ಎಲ್ಲೆಡೆ ವೈರಲ್ ಆಗುತ್ತಿವೆ.

ಈ ಬಾರಿ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ದೇವಿಯ ದರ್ಶನ ಪಡೆದಿದ್ದು, ಸುಮಾರು 2 ಕೋಟಿಗೂ ಹೆಚ್ಚು ಕಾಣಿಕೆ ಸಂಗ್ರಹವಾಗುವ ಸಾಧ್ಯತೆ ಇದೆ.