ನವದೆಹಲಿ : ದೇಶಾದ್ಯಂತ 73ನೇ ಗಣರಾಜ್ಯೋತ್ಸವ ಸಂಭ್ರಮದಿಂದ ಆಚರಿಸಲಾಗಿದೆ. ದೆಹಲಿ ರಾಜಪಥ್ ನಲ್ಲಿ ನಡೆದ ಪರೇಡ್ ನಲ್ಲಿ ಕರ್ನಾಟಕದ ಸ್ತಬ್ಧ ಚಿತ್ರ ಗಮನಸೆಳೆಯಿತು.
ಈ ಬಾರಿ ಕರ್ನಾಟಕ ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು ವಿಷಯಧಾರಿತ ಸ್ತಬ್ಧ ಚಿತ್ರ ಪ್ರದರ್ಶನಗೊಂಡಿದ್ದು, ಟ್ಯಾಬ್ಲೋ ತಯಾರಿ ಕಾರ್ಯದಲ್ಲಿ ಕಲಾವಿದ ಶಶಿಧರ್ ಅಡಪ ನೇತೃತ್ವ ವಹಿಸಿದ್ದರು. ಈ ಸ್ತಬ್ಧ ಚಿತ್ರವನ್ನು ತಯಾರು ಮಾಡಲು ಒಂದೂವರೆ ತಿಂಗಳು ಕಾಲ ನೂರಾರು ಜನರು ಒಟ್ಟಾಗಿ ಸೇರಿ ಕೆಲಸ ನಿರ್ವಹಿಸಿ ಕರ್ನಾಟಕದ ಕರಕುಶಲ ಕಲೆಯನ್ನು ದೇಶಕ್ಕೆ ಪರಿಚಯಿಸಿದ್ದಾರೆ.
ಕರ್ನಾಟಕದ ಸ್ತಬ್ದಚಿತ್ರದ ಮುಂಭಾಗದಲ್ಲಿ ಮೈಸೂರಿನ ಬೀಟೆ ಮರ ಹಾಗೂ ದಂತದ ಕಸೂತಿ ಕೆತ್ತನೆಯ ಬೃಹದಾಕಾರದ ಆನೆಯ ಕಲಾಕೃತಿ ಇದ್ದು, ಈ ಕಲಾಕೃತಿಯ ಕೆಳಗಿನ ಭಾಗದಲ್ಲಿ ಯಕ್ಷಗಾನ ಬೊಂಬೆಯಾಟದ ಚಿತ್ರಣವಿದೆ ಜೊತೆಗೆ ಗಂಜೀಫಾ ಕಲಾಕೃತಿ ಇತ್ತು. ಸ್ತಬ್ದಚಿತ್ರದ ಮಧ್ಯದಲ್ಲಿ ಕಣ್ಮನ ಸೆಳೆಯುವ ಬಿದರಿ ಕಲಾಕೃತಿ, ಕಿನ್ನಾಳ ಕಲಾ ವಸ್ತುಗಳು, ಕಂಚಿನ ಪ್ರತಿಮೆಗಳು, ಚೆನ್ನಪಟ್ಟಣದ ಮೆರುಗೆಣ್ಣೆಯ ಆಟಿಕೆಗಳು, ಮರಗೆತ್ತನೆ ಮತ್ತು ಕುಂಬಾರಿಕೆ ಹಾಗೂ ಮಧ್ಯ ಭಾಗದ ಹಿಂಬಂದಿಯಲ್ಲಿ ಕಿನ್ನಾಳದ ವೈಶಿಷ್ಠಪೂರ್ಣ ಕಲೆಯಲ್ಲಿ ಮೇಳೈಸಿದ ಬೃಹತ್ ಗಾತ್ರದ ಆಂಜನೇಯ ಸ್ವಾಮಿಯ ಮೂರ್ತಿ ಸ್ತಬ್ದಚಿತ್ರದ ಕೇಂದ್ರ ಬಿಂದುವಿನಂತೆ ಕಂಗೊಳಿಸಿತು. ಸ್ತಬ್ದಚಿತ್ರದ ಕೊನೆಯಲ್ಲಿ ಪಾರಂಪರಿಕ ಕರಕುಶಲ ಉತ್ಪನ್ನಗಳ ತಯಾರಿಕೆಗೆ ಉತ್ತೇಜನ ನೀಡಿ ಪ್ರೋತ್ಸಾಹಿಸಿದ ಕಲಾಲೋಕದ ಮಹಾಮಾತೆ, ಸ್ವಾತಂತ್ರ್ಯ ಹೋರಾಟಗಾರ್ತಿ ಹಾಗೂ ಕನ್ನಡತಿ ಕಮಲಾದೇವಿ ಚಟ್ಟೋಪಾದ್ಯಾಯ ಅವರ ದೊಡ್ಡ ಪ್ರತಿಮೆ ಸ್ತಬ್ದಚಿತ್ರಕ್ಕೆ ವಿಶೇಷ ಮೆರುಗನ್ನು ನೀಡಿತ್ತು.










