ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ದೆಹಲಿಯ ರಾಜ್ ಘಾಟ್ ನಲ್ಲಿ ಮಹಾತ್ಮಾ ಗಾಂಧಿ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನಕರ್, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮತ್ತು ಲೆಫ್ಟಿನೆಂಟ್ ಗವರ್ನರ್ ಎಲ್.ಜಿ ಸಕ್ಸೇನಾ, ಕೇಂದ್ರ ಸಚಿವರಾದ ಡಾ. ಜಿತೇಂದ್ರ ಸಿಂಗ್ ಹಾಗೂ ಮೀನಾಕ್ಷಿ ಲೇಖಿ, ರಾಜ್‍ಘಾಟ್‍ನಲ್ಲಿ ಶ್ರದ್ಧಾಂಜಲಿ ಅರ್ಪಿಸಿದರು.
ಟ್ವಿಟರ್ ನಲ್ಲಿ ಮೋದಿಯವರು, ಗಾಂಧಿ ಜಯಂತಿಯ ವಿಶೇಷ ಸಂದರ್ಭದಲ್ಲಿ ನಾನು ಮಹಾತ್ಮ ಗಾಂಧಿ ಅವರಿಗೆ ನಮಸ್ಕರಿಸುತ್ತೇನೆ. ಅವರ ಕಾಲಾತೀತ ಬೋಧನೆಗಳು ನಮ್ಮ ಹಾದಿಯನ್ನು ಬೆಳಗಿಸುತ್ತಲೇ ಇರುತ್ತವೆ. ಅವರ ಕನಸುಗಳನ್ನು ನನಸಾಗಿಸಲು ನಾವು ಯಾವಾಗಲೂ ಕೆಲಸ ಮಾಡೋಣ, ಎಲ್ಲರೂ ಏಕತೆ ಮತ್ತು ಸೌಹಾರ್ದತೆಯನ್ನು ಬೆಳೆಸಿಕೊಳ್ಳಲಿ ಎಂದು ಟ್ವೀಟ್ ಮಾಡಿದ್ದಾರೆ.
ಮಹಾತ್ಮ ಗಾಂಧಿಯವರ ಅಹಿಂಸೆ ಮತ್ತು ಸಹಿಷ್ಣುತೆಯ ಮೌಲ್ಯಗಳನ್ನು ಗೌರವಿಸಲು ಈ ದಿನವನ್ನು ಅಂತಾರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.










