40 ಪರ್ಸೆಂಟ್ ಕಮಿಷನ್ ಆರೋಪ : ಕೆಂಪಣ್ಣ ಆರೋಪದಲ್ಲಿ ಹುರುಳಿಲ್ಲ ಎಂದ ಸಿಎಂ ಬೊಮ್ಮಾಯಿ.

73
firstsuddi

ಬೆಂಗಳೂರು : ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮಾಡುತ್ತಿರುವ ಯಾವುದೇ ಆರೋಪದಲ್ಲಿ ಹುರುಳಿಲ್ಲ ಎಂದು ಕೆಂಪಣ್ಣ ಅವರ 40% ಕಮಿಷನ್ ಆರೋಪಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿಕ್ರಿಯಿಸಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಧಾರರಹಿತ ಆರೋಪಗಳನ್ನು ಮಾಡುವುದರಲ್ಲಿ ಅರ್ಥವಿಲ್ಲ. ಕಾಂಗ್ರೆಸ್ ನಾಯಕರ ಮನೆಯಿಂದ ಹೊರಗೆ ಬಂದು ಆರೋಪ ಮಾಡಿದ್ದಾರೆ. ಯಾವುದಾದರೂ ನಿರ್ದಿಷ್ಟ ಕೆಲಸ, ವಿಷಯದಲ್ಲಿ ತಪ್ಪಾಗಿದ್ದರೆ ಕೆಂಪಣ್ಣ ಅವರು ಲೋಕಾಯುಕ್ತಕ್ಕೆ ಬೇಕಾದರೆ ದೂರು ನೀಡಲಿ, ಲೋಕಾಯುಕ್ತಕ್ಕೆ ಈಗ ಹೆಚ್ಚಿನ ಬಲ ಬಂದಿದೆ. ಆಧಾರರಹಿತ ಹೇಳಿಕೆಗಳಿಂದ ಯಾವುದೇ ಪ್ರಯೋಜನವಿಲ್ಲ ಎಂದರು.

ಇವರ ಬಳಿ ದಾಖಲೆಗಳಿದ್ದರೆ ಯಾವುದೇ ಶಾಸಕ, ಸಚಿವ, ಅಧಿಕಾರಿ ವಿರುದ್ಧ ಲೋಕಾಯುಕ್ತರಿಗೆ ದೂರು ಕೊಡಲಿ. ಲೋಕಾಯುಕ್ತರು ತನಿಖೆ ಮಾಡಿ ಕ್ರಮ ತಗೊಳ್ತಾರೆ. ಆಧಾರ ರಹಿತ ಹೇಳಿಕೆಗಳು ನಿರ್ದಿಷ್ಟ ಉದ್ದೇಶದಿಂದ ಹೊರಗೆ ಬರುತ್ತವೆ. ಇವಕ್ಕೆ ನಾನು ಪ್ರತಿಕ್ರಿಯಿಸಬೇಕಿಲ್ಲ. ಪ್ರಧಾನಿಗೆ ಪತ್ರ ಬರೆಯಲು ಈ ದೇಶದ ಎಲ್ಲರಿಗೂ ಸ್ವಾತಂತ್ರ್ಯವಿದೆ. ಯಾರು ಬೇಕಾದರೂ ಪ್ರಧಾನಿಗೆ ಪತ್ರ ಬರೆಯಬಹುದು. ಅವರ ಸ್ವಾತಂತ್ರ್ಯವನ್ನು ನಾನು ಗೌರವಿಸುತ್ತೇನೆ. ಗುತ್ತಿಗೆದಾರರ ಸಂಘ ಕೆಂಪಣ್ಣ ಅವರದ್ದು ಒಂದೇ ಇಲ್ಲ. ಹಲವಾರು ಗುತ್ತಿಗೆದಾರರ ಸಂಘಗಳು ಇವೆ ಎಂದು ಬೊಮ್ಮಾಯಿ ಹೇಳಿದರು.

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪವೇನು?
ರಾಜ್ಯದಲ್ಲಿ ಮತ್ತೊಮ್ಮೆ 40% ಕಮಿಷನ್ ಆರೋಪ ಕೇಳಿಬರುತ್ತಿದೆ. ಈ ಬಗ್ಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮಾತನಾಡಿ, ಒಂದು ವರ್ಷ 2 ತಿಂಗಳಿಂದ ಹೋರಾಟ ಮಾಡುತ್ತಿದ್ದೇವೆ. ಸಿಎಂ ಮಾತಿಗೂ ಬೆಲೆ ಇಲ್ಲದಂತಾಗಿದೆ. ಮಾನ, ಮರ್ಯಾದೆ ಇಲ್ವಾ ಜನ ಪ್ರತಿನಿಧಿಗಳು ಇವರು. ಇನ್ನೂ 22 ಸಾವಿರ ಕೋಟಿ ಬಿಲ್ ಪೆಂಡಿಂಗ್ ಇದೆ. ಕೆಲವರದು 3 ವರ್ಷಗಳಿಂದ ಬಾಕಿ ಇದೆ. ನನ್ನ ಜೀವನದಲ್ಲಿ ನೋಡಿದ ಅತ್ಯಂತ ಭ್ರಷ್ಟ ಸರ್ಕಾರ ಇದಾಗಿದೆ. ಇದರಲ್ಲಿ ಬೊಮ್ಮಾಯಿ ಸೇರಿದಂತೆ ಎಲ್ಲರೂ ಇದ್ದಾರೆ. ಯಾರಿಗೂ ರ್ಯಾಂಕಿಂಗ್ ಕೊಡೋಕೆ ಆಗಲ್ಲ ಎಂದು ಆರೋಪಿಸಿದರು.

ಸರ್ಕಾರದ ಸಚಿವರು, ಶಾಸಕರು ಲಂಚ, ಭ್ರಷ್ಟಾಚಾರದಲ್ಲಿ ನಂಬರ್ 1, 2 ಸ್ಥಾನದಲ್ಲಿದ್ದಾರೆ. ಗುತ್ತಿಗೆದಾರರಿಂದ ಕಾಮಗಾರಿ ಹಣದಲ್ಲಿ ಶೇಕಡಾ 40ರಷ್ಟು ಲಂಚ ಪಡೆಯುತ್ತಾರೆ. ಅವರಿಗೆ ಇಷ್ಟೊಂದು ಲಂಚ ಹೋದರೆ ಉಳಿದ ಹಣದಲ್ಲಿ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡಲು ಹೇಗೆ ಸಾಧ್ಯ, ಗುತ್ತಿಗೆದಾರರು ಜನಪ್ರತಿನಿಧಿಗಳ ಕಿರುಕುಳದಿಂದ ನಲುಗಿ ಹೋಗುತ್ತಿದ್ದಾರೆ ಎಂದು ಕೆಂಪಣ್ಣ ಹೇಳಿದರು.

ಪ್ರಧಾನಿ ನರೇಂದ್ರ ಮೋದಿಗೆ ಮತ್ತೊಂದು ಪತ್ರ ಬರೆಯಲು ಮುಂದಾಗಿದ್ದೇವೆ. ಸ್ವಾತಂತ್ರ್ಯ ದಿನಾಚರಣೆ ವೇಳೆ ಮೋದಿ ಅವರು ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪ ಮಾಡಿದ್ದರು. ದೇಶಕ್ಕೆ ಭ್ರಷ್ಟಾಚಾರ ದೊಡ್ಡ ಮಾರಕ, ಶತ್ರು ಎಂದಿದ್ದರು. ಮೋದಿ ಮಾತನ್ನು ಉಲ್ಲೇಖಿಸಿ ಅಭಿನಂದನೆ ಪತ್ರ ಬರೆಯಲು ಮುಂದಾಗಿದ್ದೇವೆ. ಜೊತೆಗೆ ಒಂದೂವರೆ ವರ್ಷವಾದರೂ ಗುತ್ತಿಗೆದಾರರು ನೀಡಿರುವ ದೂರಿಗೆ ಯಾವ ಕ್ರಮಕೈಗೊಂಡಿದ್ದೀರಿ ಎಂಬುದನ್ನೂ ಪ್ರಸ್ತಾಪಿಸಲಿದ್ದೇವೆ ಎಂದು ತಿಳಿಸಿದರು.

ಈ ಮಧ್ಯೆ ಇಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹಾಗೂ 30ಕ್ಕೂ ಹೆಚ್ಚಿನ ಸದಸ್ಯರು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು. ಈ ವೇಳೆ ಮಾತನಾಡಿದ ಅವರು, ಸಿದ್ದರಾಮಯ್ಯಗೆ ನಾವು ಎಲ್ಲಾ ಮಾಹಿತಿ ಕೊಟ್ಟಿದ್ದೇವೆ. ಸದನದಲ್ಲಿ ಅದನ್ನು ಪ್ರಸ್ತಾಪಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ. ಆದರೆ ನಾನು ಯಾವುದೇ ದಾಖಲೆಗಳನ್ನು ಸಿದ್ದರಾಮಯ್ಯಗೆ ಕೊಟ್ಟಿಲ್ಲ. ನ್ಯಾಯಾಂಗ ತನಿಖೆ ಮಾಡಿದರೆ ಮಾತ್ರ ದಾಖಲೆ ಕೊಡುತ್ತೇವೆ. ದಾಖಲೆಯನ್ನು ನಾನು ಬಹಿರಂಗ ಪಡಿಸಿದರೆ ಗುತ್ತಿಗೆದಾರರಿಗೆ ತೊಂದರೆ ಆಗುತ್ತದೆ ಎಂಬ ಭಯ ಇದೆ ಎಂದರು.