ಕಲಬುರಗಿ: ಗುತ್ತಿಗೆದಾರ ಸಚಿನ್ ಡೆತ್ ನೋಟ್‍ನಲ್ಲಿ ಆಂದೋಲ ಶ್ರೀ ಸಿದ್ದಲಿಂಗ ಸ್ವಾಮಿ ಕೊಲೆಗೂ ಸಂಚು ಮಾಡಲಾಗಿದೆ ಎಂದು ಉಲ್ಲೇಖಿಸಿರುವುದರಿಂದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಬಳಿ ಮಂಗಳವಾರ ಪ್ರತಿಭಟನೆ ಮಾಡಿದರು. ಸ್ವಾಮೀಜಿಗೆ ಸೂಕ್ತ ಭದ್ರತೆ ನೀಡಬೇಕು ಎಂದು ಅವರು ಆಗ್ರಹಿಸಿದರು. ಗುತ್ತಿಗೆದಾರ ಸಚಿನ್‍ಗೆ ಕಿರುಕುಳ ಕೊಟ್ಟು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಲ್ಲದೆ, ಬಿಜೆಪಿ ನಾಯಕರ ಹಾಗೂ ಆಂದೋಲ ಶ್ರೀ ಸಿದ್ದಲಿಂಗ ಸ್ವಾಮೀಜಿ ಹತ್ಯೆಗೆ ಸಂಚು ಮಾಡಲಾಗಿದೆ ಎಂದು ಪ್ರತಿಭಟನಾ ನಿರತರು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜು ಕಪನೂರ ಮತ್ತು ಗ್ಯಾಂಗ್ ಸ್ವಾಮೀಜಿ ಕೊಲೆಗೆ ಪ್ಲಾನ್ ಮಾಡಿದೆ. ಇದರ ಹಿಂದೆ ಸಚಿವ ಪ್ರಿಯಾಂಕ್ ಖರ್ಗೆ ಕೈವಾಡವೂ ಇದೆ. ಹೀಗಾಗಿ ಕೂಡಲೇ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಹೇಳಿದರು. ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ವಿಚಾರಣೆಗೆ ವಹಿಸಬೇಕು. ಸಿದ್ದಲಿಂಗ ಸ್ವಾಮೀಜಿಗೆ ಗನ್‍ಮ್ಯಾನ್ ಭದ್ರತೆ ಒದಗಿಸಬೇಕು ಎಂದು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಆಗ್ರಹಿಸಿದರು. ಸಿದ್ದಲಿಂಗ ಸ್ವಾಮಿ ಈ ಹಿಂದೆ ಹಲವು ಬಾರಿ ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಲಬುರಗಿಯಲ್ಲಿ ಪ್ರಿಯಾಂಕ್ ಖರ್ಗೆ ಮತ್ತು ಸಿದ್ದಲಿಂಗ ಸ್ವಾಮೀಜಿ ಮಧ್ಯೆ ಆರೋಪ ಪ್ರತ್ಯಾರೋಪಗಳು ಹಲವು ಬಾರಿ ನಡೆದಿವೆ. ಸಚಿನ್ ಡೆತ್ ನೋಟ್‍ನಲ್ಲಿ ಆಂದೋಲ ಶ್ರೀ ಸಿದ್ದಲಿಂಗ ಸ್ವಾಮಿ, ಇತರ ಬಿಜೆಪಿ ನಾಯಕರ ಹೆಸರು ಉಲ್ಲೇಖಿಸಿ, ಇವರ ಕೊಲೆಗೆ ಸಂಚು ಮಾಡಲಾಗಿದೆ ಎಂದು ಉಲ್ಲೇಖವಾಗಿರುವುದು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರ ಆತಂಕಕ್ಕೆ ಕಾರಣವಾಗಿದೆ.










