ಬೆಂಗಳೂರು : ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪಗೆ ಕ್ಲೀನ್ ಚಿಟ್ ನೀಡಲಾಗಿದೆ.
ಪ್ರಕರಣದ ತನಿಖೆ ನಡೆಸಿದ್ದ ಉಡುಪಿ ಎಸ್ ಪಿ ವಿಷ್ಣುವರ್ಧನ್ ಅವರು ಜನಪ್ರತಿನಿಧಿಗಳ ಕೋರ್ಟ್ ಗೆ ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಪ್ರಕರಣ ಸಂಬಂಧ ಯಾವುದೇ ಸಾಕ್ಷ್ಯಾಧಾರ ಲಭ್ಯವಾಗಿಲ್ಲ. ಅಸಲಿಗೆ ಈಶ್ವರಪ್ಪ-ಸಂತೋಷ್ ಮುಖಾಮುಖಿ ಭೇಟಿಯಾಗಿರಲಿಲ್ಲ. ಹಣ ಕೇಳಿರುವುದಕ್ಕೆ ಯಾವುದೇ ಸಾಕ್ಷ್ಯಾಧಾರ ಲಭ್ಯ ಆಗಿಲ್ಲ. ವಾಟ್ಸಪ್ ಚಾಟ್, ಆಡಿಯೋ ಸೇರಿ ಯಾವುದೇ ತಾಂತ್ರಿಕ ದಾಖಲೆಗಳು ಪತ್ತೆ ಆಗಿಲ್ಲ ಎಂದು ಬಿ ರಿಪೋರ್ಟ್ ನಲ್ಲಿ ಉಲ್ಲೇಖಿಸಿದ್ದಾರೆ.
ಬೆಳಗಾವಿ ಮೂಲದ ಸಂತೋಷ್ ಪಾಟೀಲ್ ಏಪ್ರಿಲ್ 11ರಂದು ಉಡುಪಿಯ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ರು. ಪ್ರಕರಣದಲ್ಲಿ ಕೆ.ಎಸ್ ಈಶ್ವರಪ್ಪ ಹೆಸರು ಕೇಳಿ ಬಂದ ಹಿನ್ನೆಲೆ ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ ನೀಡಿದ್ರು.
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ಸಿಕ್ಕ ಹಿನ್ನೆಲೆ ಅವರ ನಿವಾಸದಲ್ಲಿ ಸಂತಸ ಮನೆ ಮಾಡಿತ್ತು. ಪತ್ನಿ, ಪುತ್ರನಿಗೆ ಸಿಹಿ ತಿನಿಸಿ ಸಂತೋಷ ಹಂಚಿಕೊಂಡ ಈಶ್ವರಪ್ಪ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಈ ಪ್ರಕರಣದಿಂದ ಮುಕ್ತನಾಗಿ ಬರುತ್ತೇನೆ ಎಂದು ಮೊದಲೇ ಗೊತ್ತಿತ್ತು. ಮನೆ ದೇವರಾದ ತಾಯಿ ಚೌಡೇಶ್ವರಿ ಆಶೀರ್ವಾದದಿಂದ ನಾನು ಗೆದ್ದು ಬರುತ್ತೇನೆ ಎಂದಿದ್ದೆ. ಇದೀಗ ಹಾಗೆ ಆಗಿದೆ ಎಂದರು.
ದೇವರು ನನ್ನ ಪರವಾಗಿರುವುದಕ್ಕೆ ಸಂತೋಷವಾಗಿದೆ. ನನ್ನಿಂದಾಗಿ ನನ್ನ ಪಕ್ಷದ ಹಿರಿಯರು ಮತ್ತು ಕಾರ್ಯಕರ್ತರಿಗೆ ಮುಜುಗರವಾಗಿತ್ತಲ್ಲ ಎಂಬ ನೋವಿತ್ತು. ಏನೂ ತಪ್ಪು ಮಾಡದ ನನ್ನ ಮೇಲೆ ಬಂದ ಆರೋಪದಲ್ಲಿ ನನ್ನ ಪಾತ್ರವಿಲ್ಲ ಎಂದು ಮೊದಲೇ ಹೇಳಿದ್ದೆ. ಸಂತೋಷ್ ಪಾಟೀಲ್ ಪತ್ನಿಗೆ ಯಾರೋ ಪ್ರಚೋದಿಸಿ ರಾಜ್ಯಪಾಲರಿಗೆ ದೂರು ಕೊಡಿಸಿದ್ದಾರೆ ಎಂದು ಆರೋಪಿಸಿದರು.










