ಹುಬ್ಬಳ್ಳಿ: ಕರ್ನಾಟಕ ಕಾಂಗ್ರೆಸ್ ಸರ್ಕಾರ ದಿವಾಳಿ ಹಂತಕ್ಕೆ ತಲುಪಿದೆ. ಗೃಹಲಕ್ಷ್ಮಿ, ಅನ್ನಭಾಗ್ಯ ದುಡ್ಡು ಕೊಡಲು ಕಾಂಗ್ರೆಸ್ ಸರ್ಕಾರದ ಬಳಿ ಹಣ ಇಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವ್ಯಂಗ್ಯ ಮಾಡಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮೆಟ್ರೋ ಪ್ರಯಾಣ ದರ ಹೆಚ್ಚಳ ಮಾಡಿ ಕೇಂದ್ರದ ಮೋದಿ ಸರ್ಕಾರ ಕಾರಣ ಎಂದು ಹೇಳಿದರು. ಆಮೇಲೆ ಕಡಿಮೆ ನಾವು ಮಾಡಿದ್ದೇವೆ ಎಂದು ಹೇಳಿದರು. ಹೆಚ್ಚು ಮಾಡುವುದು ಮೋದಿ ಸರ್ಕಾರ ಆದರೆ ಇವರು ಹೇಗೆ ಕಡಿಮೆ ಮಾಡುವುದು ಎಂದು ಪ್ರಶ್ನಿಸಿದರು. ಗೃಹಲಕ್ಷ್ಮೀ ಹಣ ಬಂದಿಲ್ಲ, ಅನ್ನಭಾಗ್ಯ ಅಕ್ಕಿನೂ ಬಂದಿಲ್ಲ. ನಾವು ಅಕ್ಕಿ ಕೊಡುತ್ತೇವೆ ಎಂದರೂ ರಾಜ್ಯ ಸರ್ಕಾರ ಖರೀದಿಸುತ್ತಿಲ್ಲ. ಇದೀಗ ಅಕ್ಕಿಯೂ ನೀಡುತ್ತಿಲ್ಲ, ಹಣವೂ ನೀಡುತ್ತಿಲ್ಲ. ನಮ್ಮ ಬಳಿ ಅಕ್ಕಿ ಇದೆ ಎಂದು ಜೂನ್ ತಿಂಗಳಿನಲ್ಲೇ ಹೇಳಿದ್ದೇನೆ. ಮೊದಲು ಕೆಜಿಗೆ 34 ರೂಪಾಯಿ ಇತ್ತು, ಈಗ 28 ರೂಪಾಯಿಗೆ ಕೊಡುತ್ತೇವೆ ಎಂದು ಹೇಳಿದರೂ ಖರೀದಿಸುತ್ತಿಲ್ಲ. ಸಚಿವ ಮುನಿಯಪ್ಪ ಭೇಟಿ ಮಾಡಿ ಹೋದರೂ ಅಕ್ಕಿ ಆರ್ಡರ್ ಮಾಡಿಲ್ಲ. ಯಾಕೆಂದರೆ ಖರೀದಿಸಲು ಅವರ ಬಳಿ ದುಡ್ಡಿಲ್ಲ ಎಂದು ಜೋಶಿ ಟೀಕಿಸಿದರು.










