ಲಂಡನ್ : ಗೃಹ ಕಾರ್ಯದರ್ಶಿ ಸುಯೆಲ್ಲಾ ಬ್ರಾವರ್ ಮನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದು ಬ್ರಿಟನ್ ಪ್ರಧಾನಿ ಲಿಜ್ ಟ್ರಸ್ ಅವರ ಸರ್ಕಾರಕ್ಕೆ ಮತ್ತೊಂದು ಹೊಡೆತ ಬಿದ್ದಿದೆ. ಶುಕ್ರವಾರ ತಮ್ಮ ಹಣಕಾಸು ಸಚಿವ ಕ್ವಾಸಿ ಕ್ವಾರ್ಟೆಂಗ್ ಅವರನ್ನು ವಜಾಗೊಳಿಸಿದ ನಂತರ ಒಂದು ವಾರದಲ್ಲಿ ಟ್ರಸ್ ಸಚಿವ ಸಂಪುಟದಿಂದ ಹೊರ ನಡೆದ ಉನ್ನತ ಸಚಿವರಲ್ಲಿ ಒಬ್ಬರಾಗಿದ್ದಾರೆ ಸುಯೆಲ್ಲಾ.
ಗೋವಾ ಮೂಲದ ತಂದೆ ಮತ್ತು ತಮಿಳು ಮೂಲದ ತಾಯಿಯ ಮಗಳಾದ ಬ್ರಾವರ್ ಮನ್ , 43 ದಿನಗಳ ಹಿಂದೆ ಬ್ರಿಟಿಷ್ ಪ್ರಧಾನಿ ಲಿಜ್ ಟ್ರಸ್ ಅಧಿಕಾರ ವಹಿಸಿಕೊಂಡಾಗ ಗೃಹ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. ನಿನ್ನೆ ಟ್ರಸ್ ಜೊತೆಗೆ ಮುಖಾಮುಖಿ ಸಭೆ ನಂತರ ಅವರು ಗೃಹ ಕಾರ್ಯದರ್ಶಿ ಹುದ್ದೆ ತೊರೆದಿದ್ದಾರೆ.
ಈ ಹಿಂದಿನ ಅರ್ಥ ಸಚಿವ ಕ್ವಾಸಿ ಕ್ವಾರ್ಟೆಂಗ್ ಅವರ ಸ್ಥಾನಕ್ಕೆ ಬಂದ ನೂತನ ಹಣಕಾಸು ಮುಖ್ಯಸ್ಥ ಜೆರೆಮಿ ಹಂಟ್ ಮಾರುಕಟ್ಟೆಯಲ್ಲಿನ ಅವ್ಯವಸ್ಥೆಯನ್ನು ಸರಿದಾರಿಗೆ ತರಲು ಕೈಗೊಂಡಿದ್ದ ಎಲ್ಲ ನಿರ್ಧಾರಗಳನ್ನು ರದ್ದುಗೊಳಿಸಿದ್ದಾರೆ. ಇದು ಟ್ರಸ್ ಸರ್ಕಾರವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಇದೀಗ ಗೃಹ ಕಾರ್ಯದರ್ಶಿ ಸುಯೆಲ್ಲಾ ಬ್ರಾವರ್ ಮನ್ ಅವರು ದಿಢೀರ್ ರಾಜೀನಾಮೆ ಘೋಷಿಸಿರುವುದು ದೊಡ್ಡ ಆಘಾತ ನೀಡಿದೆ.










