ಗೃಹ ಸಚಿವ ಅಮಿತ್ ಶಾ ಭದ್ರತೆಯಲ್ಲಿ ಲೋಪ – ಓರ್ವ ವ್ಯಕ್ತಿಯ ಬಂಧನ…

64
firstsuddi

ಮುಂಬೈ : ಮುಂಬೈ ಭೇಟಿಯ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭದ್ರತೆಯಲ್ಲಿ ಭಾರಿ ಲೋಪ ಕಂಡು ಬಂದಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮಹಾರಾಷ್ಟ್ರದ ಧೂಲೆ ನಿವಾಸಿ ಹೇಮಂತ್ ಪವಾರ್ (32) ಎಂಬುವರನ್ನು ಬಂಧಿಸಲಾಗಿದೆ. ಆರೋಪಿಯು ತಾನು ಆಂಧ್ರ ಪ್ರದೇಶದ ಸಂಸದರೊಬ್ಬರ ಆಪ್ತ ಸಹಾಯಕ (ಪಿಎ) ಹಾಗು ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಯೆಂದು ಹೇಳಿ ಭದ್ರತಾ ಸಿಬ್ಬಂದಿಗೆ ನಕಲಿ ಗುರುತಿನ ಚೀಟಿ ತೋರಿಸಿದ್ದಾನೆ ಎಂದು ತಿಳಿದುಬಂದಿದೆ.

ಅನುಮಾನಗೊಂಡ ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಪವಾರ್ ಅವರನ್ನು ಪ್ರಶ್ನಿಸಿದ್ದು, ಆ ಸಂದರ್ಭದಲ್ಲಿ ಆತ ನಕಲಿ ಅಧಿಕಾರಿ ಎಂಬ ವಿಷಯ ತಿಳಿದಿದೆ. ಪವಾರ್ ನನ್ನು ಬಂಧಿಸಿರುವ ಪೊಲೀಸರು ಗಿರ್ಗಾಂವ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 5 ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ.