ಗೋಮಾಂಸದ ಬಗ್ಗೆ ಮಾತನಾಡಿ ಕಾಂಗ್ರೆಸ್‍ನಿಂದ ಮತಬ್ಯಾಂಕ್ ರಾಜಕೀಯ ನಡೆಯುತ್ತಿದೆ : ಆರ್. ಅಶೋಕ್.

131
firstsuddi

ಚಿತ್ರದುರ್ಗ : ಗೋಮಾಂಸದ ಬಗ್ಗೆ ಮಾತನಾಡಿ ಕಾಂಗ್ರೆಸ್‍ನಿಂದ ಮತಬ್ಯಾಂಕ್ ರಾಜಕೀಯ ನಡೆಯುತ್ತಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಅವರು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಇನ್ನು ಎರಡೂವರೆ ವರ್ಷಗಳ ಕಾಲ ಬಿ.ಎಸ್. ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ. ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಯಲ್ಲಿ ಹುರುಳಿಲ್ಲ. ನಾಯಕತ್ವ ಬದಲಾವಣೆ ಯಾವುದೇ ಕಾರಣಕ್ಕೂ ಆಗುವುದಿಲ್ಲ. ಮುಖ್ಯಮಂತ್ರಿ ಆಗಿ ಬಿ.ಎಸ್ ಯಡಿಯೂರಪ್ಪ ಅವರೇ ಮುಂದುವರೆಯಬೇಕು ಎಂಬುವುದು ಎಲ್ಲರ ಬಯಕೆ. ಕೇಂದ್ರ ನಾಯಕರು ಕೂಡಾ ಮುಖ್ಯಮಂತ್ರಿ ಬದಲಾವಣೆ ಕುರಿತು ಪ್ರಸ್ತಾಪ ಮಾಡಿಲ್ಲ. ವಿರೋಧ ಪಕ್ಷ ಹೇಳುವ ಮಾತುಗಳು ಅವರ ಆರೋಪವಷ್ಟೇ. ನಮ್ಮ ಸರ್ಕಾರ ಹಣಕಾಸಿನ ಸಮಸ್ಯೆ ನಡುವೆ ಕೋವಿಡ್ ಸಮಸ್ಯೆಯನ್ನು ನಿಬಾಯಿಸಿದ್ದೇವೆ. ಸಿದ್ದರಾಮಯ್ಯ ಅವರ ಸರ್ಕಾರ ಸುಖದಲ್ಲೇ ಕಾಲ ಕಳೆದಿತ್ತು. ಹೊಟ್ಟೆಕಿಚ್ಚಿನಿಂದ ಕಾಂಗ್ರೆಸ್ ನಾಯಕರಿಂದ ಸರ್ಕಾರದ ಬಗ್ಗೆ ಟೀಕೆ ವ್ಯಕ್ತವಾಗುತ್ತಿದೆ. ಚಟ ತೀರಿಸಿಕೊಳ್ಳಲು ಬಿಜೆಪಿ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದರು. ಇದೆ ವೇಳೆ ಆರ್‍ಎಸ್‍ಎಸ್ ನವರು ಸಗಣಿ, ಗಂಜಲು ಎತ್ತುತಿಲ್ಲ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಕುರಿತು ಪ್ರತಿಕ್ರಯಿಸಿದ ಅವರು, ಸಿದ್ದರಾಮಯ್ಯ ಅವರು ಯಾವಾಗ ಆರ್‍ಎಸ್‍ಎಸ್ ಸೇರಿದ್ದರು? ಸಿದ್ದರಾಮಯ್ಯ ನೋಡದೇ ಆರ್‍ಎಸ್‍ಎಸ್ ಬಗ್ಗೆ ಮಾತನಾಡುವುದು ಸರಿಯಲ್ಲ. ಸಿದ್ದರಾಮಯ್ಯ ಅವರು ಇತ್ತೀಚೆಗೆ ಜ್ಯೋತಿಷ್ಯ ಹೇಳಲು ಆರಂಭಿಸಿದ್ದಾರೆ ಎಂದು ಕಿಡಿಕಾರಿದರು.