ಗೌರಿ ಗಣೇಶ ಹಬ್ಬಕ್ಕೆ ಪತಿ ತವರು ಮನೆಗೆ ಕಳುಹಿಸಲಿಲ್ಲ ಎಂದು ಮನನೊಂದು ಗೃಹಿಣಿ ಆತ್ಮಹತ್ಯೆ…

133
firstsuddi

ಚಿಕ್ಕಬಳ್ಳಾಪುರ : ಗೌರಿ ಗಣೇಶ ಹಬ್ಬಕ್ಕೆ ಗಂಡ ತವರು ಮನೆಗೆ ಕಳುಹಿಸಲಿಲ್ಲ ಎಂದು ಮನನೊಂದು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಚಿಂತಾಮಣಿ ನಗರದ ಪ್ರಭಾಕರ ಬಡಾವಣೆಯಲ್ಲಿ ನಡೆದಿದೆ. ನಿಂಗಮ್ಮ(38) ಆತ್ಮಹತ್ಯೆಗೆ ಶರಣಾದ ಗೃಹಿಣಿ ಎಂದು ಗುರುತಿಸಲಾಗಿದೆ. ಕೆ.ಎಸ್.ಆರ್.ಟಿ.ಸಿ ಬಸ್ ಕಂಡಡಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಬಾಗಲಕೋಟೆ ಮೂಲದ ಸಂಗಮೇಶ್ ದಂಪತಿ ಪ್ರಭಾಕರ ಬಡಾವಣೆಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಆಗಸ್ಟ್ 21 ಹಾಗೂ 22ರಂದು ಗೌರಿ ಗಣೇಶ್ ಹಬ್ಬವಿದ್ದ ಹಿನ್ನೆಲೆ, ಪತ್ನಿ ನಿಂಗಮ್ಮ ಅವರು ತನ್ನ ಪತಿ ಸಂಗಮೇಶ್ ಅವರ ಬಳಿ ಹಬ್ಬಕ್ಕೆ ತವರು ಮನೆಗೆ ಹೋಗುವುದಾಗಿ ಕೇಳಿದ್ದಾರೆ. ಆದರೆ ಪತಿ ಸಂಗಮೇಶ್ ಅವರು ತವರು ಮನೆಗೆ ಹೋಗುವುದು ಬೇಡ ಎಂದು ಹೇಳಿದ್ದಾರೆ. ಇದರಿಂದ ಮನನೊಂದಿದ್ದ ಪತ್ನಿ ನಿಂಗಮ್ಮ ಸೋಮವಾರ ತಡರಾತ್ರಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮೃತ ಗೃಹಿಣಿಯ ಪೋಷಕರು ಪತಿ ಸಂಗಮೇಶ್ ವಿರುದ್ಧ ಕಿರುಕುಳ ಆರೋಪದ ಅಡಿಯಲ್ಲಿ ದೂರನ್ನು ನೀಡಿದ್ದು, ದೂರನ್ನು ಸ್ವೀಕರಿಸಿದ ಚಿಂತಾಮಣಿ ಪೊಲೀಸರು ಸಂಗಮೇಶ್ ಅವರನ್ನು ಬಂಧಿಸಿ ವಿಚಾರಣೆ ನಮಡೆಸುತ್ತಿದ್ದಾರೆ.