ತುಮಕೂರು: ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ದಿಗೂ ಒತ್ತು ನೀಡುತ್ತಿದ್ದು, ಪ್ರತಿಪಕ್ಷಗಳ ಸುಳ್ಳುಗಳಿಗೆ ಜನರು ಕಿವಿಗೊಡಬಾರದು ಎಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಹೇಳಿದರು. ತುಮಕೂರಿನಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಂದ ಕರ್ನಾಟಕದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎಂಬ ಪ್ರತಿಪಕ್ಷಗಳ ಹೇಳಿಕೆ ವಿರುದ್ಧ ಕಿಡಿಕಾರಿದರು. ಕೆಲವರು ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎಂದು ಅನವಶ್ಯಕ ಚರ್ಚೆ ಮಾಡುತ್ತಿದ್ದಾರೆ. ಸುಮಾರು 250 ಕೋಟಿಯಷ್ಟು ಹಣ ಗ್ಯಾರಂಟಿ ಯೋಜನೆಗಳ ಮೂಲಕ ಒಂದೊಂದು ವಿಧಾನಸಭಾ ಕ್ಷೇತ್ರಗಳಿಗೆ ತಲುಪುತ್ತಿದೆ. ಗೃಹಲಕ್ಷ್ಮಿ, ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ ಯೋಜನೆಗಳ ಮೂಲಕ ಮಹಿಳೆಯರ ಸಬಲೀಕರಣವಾಗುತ್ತಿದೆ. ಇದು ಅಭಿವೃದ್ದಿಯಲ್ಲವೇ? ಎಂದು ಪ್ರಶ್ನಿಸಿದರು. ತುಮಕೂರು ಜಿಲ್ಲೆಯ ಲಂಬಾಣಿ ಜನಾಂಗಗಳಿಗೆ 94ಡಿ ಅಡಿಯಲ್ಲಿ ಅವರು ವಾಸವಿರುವ ಜಮೀನುಗಳನ್ನು ಸಕ್ರಮ ಮಾಡಿ, ಹತ್ತಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಲಸವನ್ನು ಕೈಗೂಡಿಸಿದೆ. ಈಗಾಗಲೇ ಎತ್ತಿನಹೊಳೆ ಯೋಜನೆಗೆ ನಮ್ಮ ಸರ್ಕಾರ ಉದ್ಘಾಟಿಸಿದೆ. ಮಧ್ಯದಲ್ಲಿ ಒಂದಷ್ಟು ಅಡೆತಡೆಗಳಿದ್ದುತ ಅದನ್ನು ಆದಷ್ಟು ಬೇಗ ನಿವಾರಿಸಿ ತುಮಕೂರು ಜಿಲ್ಲೆಗೆ ನೀರು ಕೊಡುತ್ತೇವೆಂದು ಹೇಳಿದರು. ಜನರ ಬದುಕಿಗಾಗಿ ಐದು ಗ್ಯಾರಂಟಿ ಯೋಜನೆಗಳ ಮೂಲಕ 56 ಸಾವಿರ ಕೋಟಿ ಹಣವನ್ನು ವಿನಿಯೋಗ ಮಾಡುತ್ತಿದ್ದೇವೆ. ನಮ್ಮ ಗ್ಯಾರಂಟಿ ಯೋಜನೆಗಳ ಶಕ್ತಿ ಇಡೀ ದೇಶಕ್ಕೆ ಪರಿಚಿತವಾಗಿದೆ. ದೇಶದ ಒಂದಷ್ಟು ರಾಜ್ಯಗಳಲ್ಲಿ ಇರುವ ಬಿಜೆಪಿ ರಾಜ್ಯ ಸರ್ಕಾರಗಳು ನಮ್ಮ ಯೋಜನೆಗಳನ್ನು ನಕಲು ಮಾಡಿ ಜಾರಿಗೆ ತರುತ್ತಿರುವುದು ಸಂತೋಷದ ಸಮಾಚಾರ ಎಂದು ತಿಳಿಸಿದರು.










