ಕಲಬುರುಗಿ : ಗ್ಯಾಸ್ ಸೋರಿಕೆಯಿಂದಾಗಿ ಮನೆಗೆ ಬೆಂಕಿ ಬಿದ್ದು ಸುಟ್ಟು ಭಸ್ಮವಾಗಿರುವ ಘಟನೆ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಸಂಕನೂರ ಗ್ರಾಮದಲ್ಲಿ ನಡೆದಿದೆ. ಫಾತಿಮಾ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದ್ದು, 9 ಕೋಳಿಗಳು, ಫ್ರಿಡ್ಜ್, ಧವಸಧಾನ್ಯ, ಬಟ್ಟೆ ಬರೆ ಸೇರಿದಂತೆ ಅರ್ಧಭಾಗ ಸುಟ್ಟು ಕರಕಲಾದ ನೂರಾರು ನೋಟುಗಳು ಬೆಂಕಿಗಾಹುತಿಯಾಗಿದೆ.
ಪಕ್ಕದ ಮನೆಯವರು ಊರಿಗೆ ಹೋಗುವಾಗ ಫಾತಿಮಾಗೆ ತಮ್ಮ ಗ್ಯಾಸ್ ಬಳಸಲು ಕೊಟ್ಟಿದ್ದರು. ಆದರೆ ಗ್ಯಾಸ್ ಲೀಕೇಜ್ ಆಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಸಿಲಿಂಡರ್ ಸ್ಫೋಟಗೊಂಡಿದೆ. ನಿನ್ನೆ ಸಂಜೆ ಈ ದುರ್ಘಟನೆ ನಡೆದಿದ್ದು, ಮನೆ ಕಟ್ಟಲು ಅಂತ ಫಾತಿಮಾ ಕೂಡಿಟ್ಟಿದ್ದ ಎರಡು ಲಕ್ಷ ರೂ. ನಗದು ಅಗ್ನಿಗಾಹುತಿಯಾಗಿದೆ. ಅದೃಷ್ಟವಶಾತ್ ಬೆಂಕಿ ಹತ್ತಿಕೊಂಡ ತಕ್ಷಣವೇ ಮನೆ ಬಿಟ್ಟು ಹೊರಹೋಗಿದ್ದರಿಂದ ಮಹಿಳೆ ಅನಾಹುತದಿಂದ ಪಾರಾಗಿದ್ದಾರೆ.
ಘಟನೆ ಸಂಬಂಧ ಚಿತ್ತಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










