ಮೀರತ್ : ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಲಿಸಾರಿ ಗೇಟ್ ಪ್ರದೇಶದ ಸೊಹೈಲ್ ಗಾರ್ಡನ್ ನಲ್ಲಿರುವ ಮನೆಯಲ್ಲಿ ಒಂದೇ ಕುಟುಂಬದ 5 ಮಂದಿಯ ಶವ ಪತ್ತೆಯಾಗಿವೆ. ಒಬ್ಬ ಮಹಿಳೆ, ಒಬ್ಬ ಪುರುಷ ಮತ್ತು ಅವರ 3 ಮಂದಿ ಹೆಣ್ಣುಮಕ್ಕಳನ್ನು ಒಳಗೊಂಡ ಕುಟುಂಬವನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ ಎಂದು ತಿಳಿಸಲಾಗಿದೆ. ಅವರ ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದಿಲ್ಲ. ಮೃತರನ್ನು ಮೊಯಿನ್, ಅವರ ಪತ್ನಿ ಅಸ್ಮಾ, ಮೂವರು ಹೆಣ್ಣು ಮಕ್ಕಳಾದ 1 ವರ್ಷದ ಅಡಿಬಾ, 4 ವರ್ಷದ ಅಜೀಜಾ ಮತ್ತು 8 ವರ್ಷದ ಅಫ್ಸಾ ಎಂದು ಗುರುತಿಸಲಾಗಿದೆ. ಶವಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಮೃತದೇಹಗಳನ್ನು ಕಳುಹಿಸಲಾಗಿದೆ ಎಂದು ಅವರು ತಿಳಿಸಿದರು. ಮನೆಗೆ ಹೊರಗಿನಿಂದ ಬೀಗ ಹಾಕಲಾಗಿದ್ದು ಛಾವಣಿ ಮೂಲಕ ಒಳಗೆ ಹೋಗಿ ನೋಡಿದಾಗ ಮೃತ ದೇಹಗಳು ಪತ್ತೆಯಾಗಿದೆ. 3 ಜನ ಮಕ್ಕಳ ಶವಗಳನ್ನು ಮಂಚದ ಬಾಕ್ಸ್ನಲ್ಲಿ ಇಡಲಾಗಿತ್ತು. ಮೊಹಿನ್ ಕಾಲುಗಳನ್ನು ಬೆಡ್ಶೀಟ್ನಿಂದ ಕಟ್ಟಲಾಗಿತ್ತು ಎಂದು ಹಿರಿಯ ಪೊಲೀಸ್ ಅಧೀಕ್ಷಕ ವಿಪಿನ್ ತಾಡ ಮಾಹಿತಿ ನೀಡಿದ್ದಾರೆ.










