ಬೆಂಗಳೂರು: ಚಂದ್ರಯಾನ-3 ಕುರಿತು ಅಪಹಾಸ್ಯ ರೀತಿಯ ಫೋಟೋ ಟ್ವೀಟ್ ಮಾಡಿದ್ದ ನಟ ಪ್ರಕಾಶ್ ರೈ ವಿರುದ್ಧ ದೂರು ದಾಖಲಾಗಿದೆ.
ಚಂದ್ರಯಾನ ಮತ್ತು ಭಾರತೀಯ ವಿಜ್ಞಾನಿಗಳನ್ನು ಅವಮಾನಿಸಿದ್ದಾರೆ ಎನ್ನುವ ಕಾರಣಕ್ಕಾಗಿ ಬಾಗಲಕೋಟೆ ಜಿಲ್ಲೆ ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕಾಶ್ ರಾಜ್ ವಿರುದ್ದ ದೂರು ದಾಖಲಾಗಿದೆ. ಹಿಂದೂ ಸಂಘಟನೆ ಮುಖಂಡ ನಂದು ಗಾಯಕವಾಡ ಹಾಗೂ ಇತರರಿಂದ ದೂರು ಸಲ್ಲಿಸಿದ್ದಾರೆ. ನಮ್ಮ ಹೆಮ್ಮೆಯ ವಿಜ್ಞಾನಿಗಳ ಬಗ್ಗೆ ವ್ಯಂಗ್ಯವಾಗಿ ಫೋಸ್ಟ್ ಮಾಡಿ ಪ್ರಕಾಶ್ ರಾಜ್ ತಮ್ಮ ವಿಕೃತಿ ಮೆರೆದಿದ್ದಾರೆ. ಅವರು ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿದ್ದಾರೆ. ಕೂಡಲೇ ಅವರನ್ನು ಬಂಧಿಸುವಂತೆ ದೂರಿನಲ್ಲಿ ಆಗ್ರಹಿಸಿದ್ದಾರೆ.
ಚಂದ್ರಯಾನ-3 ಕುರಿತಂತೆ ಟ್ವೀಟ್ ಮಾಡಿ ವಿವಾದ ಮೈಮೇಲೆ ಎಳೆದುಕೊಂಡಿರುವ ಪ್ರಕಾಶ್ ರಾಜ್, ʻದ್ವೇಷಕ್ಕೆ ದ್ವೇಷ ಮಾತ್ರ ಕಾಣಿಸುತ್ತದೆ. ನಾನು ಉಲ್ಲೇಖಿಸಿದ್ದು ನಮ್ಮ ಕೇರಳದ ಚಾಯ್‌ವಾಲಾರನ್ನ ವಿಜೃಂಭಿಸುವ ಆರ್ಮ್‌ಸ್ಟ್ರಾಂಗ್ ಕಾಲದ ಜೋಕ್. ಟ್ರೋಲಿಗರ ಕಣ್ಣಿಗೆ ಕಾಣಿಸಿದ ಚಾಯ್‌ವಾಲಾ ಯಾರು? ನಿಮಗೆ ಜೋಕ್ ಅರ್ಥವಾಗದಿದ್ದರೆ, ಅದು ನಿಮ್ಮ ಮೇಲೆಯೇ ಮಾಡಿದ ಜೋಕ್ ಆಗುತ್ತದೆ. ಬಾಲಿಶವಾಗಿ ವರ್ತಿಸುವುದನ್ನು ನಿಲ್ಲಿಸಿʼ ಎಂದು ಮತ್ತೊಂದು ಟ್ವೀಟ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.










