ಅಬುಜಾ : ನೈರುತ್ಯ ನೈಜೀರಿಯಾದ ಕ್ಯಾಥೋಲಿಕ್ ಚರ್ಚ್ ಮೇಲೆ ನಿನ್ನೆ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 50 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಒಂಡೋ ರಾಜ್ಯದ ಸೇಂಟ್ ಫ್ರಾನ್ಸಿಸ್ ಕ್ಯಾಥೋಲಿಕ್ ಚರ್ಚ್ ನಲ್ಲಿ ಭಕ್ತರು ಪ್ರಾರ್ಥನೆ ಕೈಗೊಂಡಿದ್ದರು. ಭಕ್ತರು ಚರ್ಚ್ ನಲ್ಲಿ ಜಮಾಯಿಸಿದಂತೆಯೇ ದಾಳಿಕೋರರು ಗುಂಡಿನ ದಾಳಿ ನಡೆಸಿದ್ದಾರೆ.
ದಾಳಿಕೋರರ ಗುರುತು ಮತ್ತು ಉದ್ದೇಶ ತಕ್ಷಣವೇ ಸ್ಪಷ್ಟವಾಗಿಲ್ಲ. ಚರ್ಚ್‍ನಲ್ಲಿ ಪ್ರಾರ್ಥನೆ ನಡೆಯುತ್ತಿರುವಾಗ ಅಪರಿಚಿತ ಬಂದೂಕುದಾರಿಗಳು ಚರ್ಚ್ ಮೇಲೆ ದಾಳಿ ಮಾಡಿದರು. ಈ ವೇಳೆ ಅನೇಕರು ಸಾವನ್ನಪ್ಪಿದರು ಮತ್ತು ಅನೇಕರು ಗಾಯಗೊಂಡರು ಎಂದು ನೈಜೀರಿಯಾದ ಕ್ಯಾಥೋಲಿಕ್ ಚರ್ಚ್‍ನ ವಕ್ತಾರ ರೆವರೆಂಡ್ ಅಗಸ್ಟೀನ್ ಇಕ್ವು ಹೇಳಿದ್ದಾರೆ.
ಈ ಘಟನೆ ಕುರಿತಂತೆ ಪ್ರತಿಕ್ರಿಯಿಸಿದ ಒಂಡೋ ರಾಜ್ಯದ ಪೊಲೀಸ್ ವಕ್ತಾರ ಫನ್ಮಿಲಾಯೊ ಇಬುಕುನ್ ಒಡುನ್ಲಾಮಿ, ಬಂದೂಕುಧಾರಿ ಚರ್ಚ್ ಕಟ್ಟಡದ ಹೊರಗೆ ಮತ್ತು ಒಳಗೆ ಜನರ ಮೇಲೆ ಗುಂಡು ಹಾರಿಸಿದ್ದಾನೆ. ಸದ್ಯ ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.










