ಮುಂಬೈ : ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋಗಿ ತುಂಬು ಗರ್ಭಿಣಿಯೊಬ್ಬರು ಜಾರಿ ಕೆಳಗೆ ಬಿದ್ದಿದ್ದು, ಕೂಡಲೇ ಆರ್ ಪಿಎಫ್ ಯೋಧರೊಬ್ಬರು ರಕ್ಷಣೆ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಕಲ್ಯಾಣ್ ರೈಲ್ವೆ ಸ್ಟೇಷನ್ ನಲ್ಲಿ ನಿನ್ನೆ ಈ ಘಟನೆ ನಡೆದಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.
ಮಹಿಳೆ ತನ್ನ ಪತಿ ಹಾಗೂ ಮಗನ ಜೊತೆ ತೆರಳಬೇಕಿದ್ದ ರೈಲಿಗೆ ಹತ್ತುವ ಬದಲು ಬೇರೊಂದು ರೈಲಿಗೆ ಹತ್ತಿದ್ದಾರೆ. ಬಳಿಕ ಈ ಬಗ್ಗೆ ಅರಿತ ಮಹಿಳೆ ಇಳಿಯಲು ಮುಂದಾದಾಗ ರೈಲು ಚಲಿಸಲು ಆರಂಭವಾಗಿದೆ. ಆದರೂ, ಮಹಿಳೆ ರೈಲು ಇಳಿಯಲು ಯತ್ನಿಸಿದಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಇದನ್ನು ಗಮನಿಸಿದ ಆರ್‌ಪಿಎಫ್ ಯೋಧ ಕೂಡಲೇ ಧಾವಿಸಿ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ.
ಘಟನೆಯ ಸಿಸಿಟಿವಿ ದೃಶ್ಯವನ್ನು ಮುಂಬೈನ ಸೆಂಟ್ರಲ್ ರೈಲ್ವೇಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಶಿವಾಜಿ ಸುತಾರ್ ಅವರು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ಕಲ್ಯಾಣ್ ರೈಲ್ವೇ ಸ್ಟೇಷನ್ ನ ಆರ್ ಪಿಎಫ್ ಅಧಿಕಾರಿ ಎಸ್.ಆರ್ ಖಂದೇಕರ್ ಮಹಿಳೆಯನ್ನು ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ. ಚಲಿಸುತ್ತಿರುವ ರೈಲನ್ನು ಹತ್ತುವುದು ಅಥವಾ ಇಳಿಯುವ ಸಾಹಸ ಮಾಡಬೇಡಿ ಎಂದು ಪ್ರಯಾಣಿಕರಲ್ಲಿ ಮನವಿ ಮಾಡಿದ್ದಾರೆ.










