ಚಾಂಪಿಯನ್ ಆಟ ಮುಂದುವರೆಸುತ್ತೇನೆ – ವಿಶ್ವಕಪ್ ಗೆದ್ದ ಬಳಿಕ ನಿವೃತ್ತಿ ನಿರ್ಧಾರ ಬದಲಿಸಿದ ಮೆಸ್ಸಿ.

79
firstsuddi

ದೋಹಾ(ಕತಾರ್) : ಫಿಫಾ ವಿಶ್ವಕಪ್ ನಲ್ಲಿ ಫ್ರಾನ್ಸ್ ಸೋಲಿಸುವ ಮೂಲಕ ಅರ್ಜೆಂಟೀನಾ ಮೂರನೇ ಬಾರಿಗೆ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದೆ. 35 ವರ್ಷದ ಮೆಸ್ಸಿಗೆ ಇದು ಕೊನೆಯ ವಿಶ್ವಕಪ್ ಪಂದ್ಯ ಎಂದು ಹೇಳಲಾಗಿತ್ತು. ಆದರೆ ಚಾಂಪಿಯನ್ ಆಟಗಾರ ತಾವು ತಂಡದ ಪರ ಆಟ ಮುಂದುವರೆಸುವುದಾಗಿ ಹೇಳಿಕೊಂಡಿದ್ದಾರೆ.

ಈ ವಿಶ್ವಕಪ್ ನಂತರ ಮೆಸ್ಸಿ ಅರ್ಜೆಂಟೀನಾ ರಾಷ್ಟ್ರೀಯ ತಂಡದಿಂದ ನಿವೃತ್ತಿ ಘೋಷಿಸಲಿದ್ದಾರೆ ಎಂಬ ಮಾತುಗಳೂ ಕೇಳಿಬಂದಿದ್ದವು. 2026ರಲ್ಲಿ ನಾಲ್ಕು ದೇಶಗಳಲ್ಲಿ ಆಯೋಜನೆಗೊಳ್ಳಲಿರುವ ಕಾಲ್ಚೆಂಡಿನ ಆಟಕ್ಕೆ ಆಡುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿತ್ತು. ಆದರೆ ಚಾಂಪಿಯನ್ ಆದ ಬಳಿಕ ತನ್ನ ನಿರ್ಧಾರವನ್ನು ಬದಲಿಸಿಕೊಂಡಿರುವ ಮೆಸ್ಸಿ, ಇಲ್ಲ ನಾನು ನನ್ನ ರಾಷ್ಟ್ರೀಯ ತಂಡದಿಂದ ನಿವೃತ್ತಿಯಾಗುತ್ತಿಲ್ಲ. ನಾನು ಚಾಂಪಿಯನ್ ಆಗಿ ಆಡುವುದನ್ನು ಮುಂದುವರೆಸಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ಪಂದ್ಯದ ಮೊದಲಾರ್ಧದಲ್ಲಿ ಅರ್ಜೆಂಟೀನಾ ಎರಡು ಗೋಲು ಗಳಿಸುವ ಮೂಲಕ ಮುನ್ನಡೆ ಸಾಧಿಸಿತು. 23ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿಯನ್ನು ಮೆಸ್ಸಿ ಗೋಲಾಗಿ ಪರಿವರ್ತಿಸಿ ಅರ್ಜೆಂಟೀನಾಗೆ ಮುನ್ನಡೆ ತಂದುಕೊಟ್ಟರು. ನಂತರ 36ನೇ ನಿಮಿಷದಲ್ಲಿ ಏಂಜೆಲ್ ಡಿಮಾರಿಯಾ ಗೋಲು ಬಾರಿಸುವುದರೊಂದಿಗೆ ಅರ್ಜೆಂಟೀನಾಕ್ಕೆ 2-0 ಗೋಲುಗಳ ಮುನ್ನಡೆ ತಂದುಕೊಟ್ಟರು. ಹೀಗಾಗಿ ಪಂದ್ಯವನ್ನು ಮೆಸ್ಸಿಯ ತಂಡ ಭಾಗಶಃ ಗೆದ್ದಂತೆಯೇ ತೋರುತ್ತಿತ್ತು.

ಆದರೆ ಫ್ರೆಂಚ್ ಸ್ಟಾರ್ ಕೈಲಿಯನ್ ಎಂಬಪ್ಪೆ 80 ಮತ್ತು 81 ನೇ ನಿಮಿಷಗಳಲ್ಲಿ ಎರಡು ಗೋಲುಗಳನ್ನು ಗಳಿಸಿ ತಮ್ಮ ತಂಡವನ್ನು ಸಮಸ್ಥಿತಿಗೆ ತಂದರು. ಇದರ ನಂತರ, ಹೆಚ್ಚುವರಿ ಸಮಯದಲ್ಲಿ, ಮೆಸ್ಸಿ 108 ನೇ ನಿಮಿಷದಲ್ಲಿ ಗೋಲು ಗಳಿಸಿ ಅರ್ಜೆಂಟೀನಾಕ್ಕೆ ಮುನ್ನಡೆ ತಂದುಕೊಟ್ಟರು. ಆದರೆ 10 ನಿಮಿಷಗಳ ನಂತರ ಎಂಬಪ್ಪೆ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿ ಸ್ಕೋರ್ ಅನ್ನು ಸಮಗೊಳಿಸಿದರು. ಅಂತಿಮವಾಗಿ ಪೆನಾಲ್ಟಿ ಶೂಟೌಟ್ ನಲ್ಲಿ ಅರ್ಜೆಂಟೀನಾ 4-2 ಗೋಲುಗಳಿಂದ ಫ್ರಾನ್ಸ್ ತಂಡವನ್ನು ಮಣಿಸಿ ವಿಶ್ವಕಪ್ ಎತ್ತಿಹಿಡಿಯಿತು.