ದೇವನಹಳ್ಳಿ : ಕ್ರೇನ್ ಹರಿದು ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ ಬೆಂಗಳೂರು ಪೂರ್ವ ತಾಲೂಕಿನ ಕನ್ನಮಂಗಲ ಗೇಟ್ ಬಳಿ ನಡೆದಿದೆ. ಚಾಲಕನ ಅಜಾಗರೂಕತೆ ಈ ದುರ್ಘಟನೆ ಸಂಭವಿಸಿದ್ದು, ಭೀಕರ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ನೂರ್ ಫಿಜ (19) ಮೃತ ವಿದ್ಯಾರ್ಥಿನಿ. ಶಾಲೆ ಮುಗಿಸಿಕೊಂಡು ಕನ್ನಮಂಗಲ ಬಳಿ ಹೋಗುತ್ತಿದ್ದಾಗ ಕ್ರೇನ್ ಚಾಲಕ ಹಿಂಬದಿಯಿಂದ ಬಂದು ಗುದ್ದಿ, ವಿದ್ಯಾರ್ಥಿನಿ ಮೇಲೆ ಕ್ರೇನ್ ಹತ್ತಿಸಿದ್ದಾನೆ. ಅಪಘಾತಕ್ಕೀಡಾಗಿ ರಕ್ತಸಿಕ್ತವಾಗಿ ಬಳಲುತ್ತಿದ್ದ ವಿದ್ಯಾರ್ಥಿನಿಯನ್ನು ಸಮೀಪದ ಆಸ್ಪತ್ರೆಗೆ ಸೇರಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ನಂತರ ವೈಟ್ ಫೀಲ್ಡ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ.
ಕ್ರೇನ್ ಮಾಲೀಕ ಪೆರಿಯಸ್ವಾಮಿ ವಿರುದ್ಧ ಯುವತಿ ತಂದೆ ರೆಹಮಾನ್ ಖಾನ್ ವೈಟ್ ಫೀಲ್ಡ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.










