ಚಿತ್ರದುರ್ಗ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಸೇತುವೆಗೆ ಡಿಕ್ಕಿಯಾದ ಪರಿಣಾಮ ಮೂವರು ಪುಟ್ಟ ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಸಾಣಿಕೆರೆ ಬಳಿ ನಡೆದಿದೆ.
ಮೃತರನ್ನು ಲಿಂಗಪ್ಪ (26), ಸಿಂಧುಶ್ರೀ (2), ಹಯ್ಯಾಳಪ್ಪ (5 ತಿಂಗಳು), ರಕ್ಷಾ (3 ತಿಂಗಳು) ಎಂದು ಗುರುತಿಸಲಾಗಿದೆ. ಮೃತರು ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ದಂಡಮ್ಮನಹಳ್ಳಿ ಗ್ರಾಮದವರು ಎಂದು ತಿಳಿದು ಬಂದಿದೆ. ಇವರೆಲ್ಲರೂ ಕೂಲಿ ಕಾರ್ಮಿಕರಾಗಿದ್ದು, ಕೆಲಸಕ್ಕಾಗಿ ಬೆಂಗಳೂರಿನತ್ತ ಪಯಣ ಬೆಳೆಸಿದ್ದರು. ಒಂದೇ ಕುಟುಂಬದ ಕಾರ್ಮಿಕರಾಗಿದ್ದು, ತಮ್ಮ ಮಕ್ಕಳ ಸಹಿತ ಕಾರಲ್ಲಿ ಹೊರಟಿದ್ದರು. ಬೆಳಗ್ಗಿನ ಜಾವ ನಿದ್ರೆ ಮಂಪರಿನಲ್ಲಿದ್ದ ಕಾರಿನ ಚಾಲಕ ರಸ್ತೆ ಬದಿಯಲ್ಲಿದ್ದ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ.
ಘಟನೆಯಲ್ಲಿ ಇನ್ನೂ ಮೂವರು ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳನ್ನು ಯಲ್ಲಮ್ಮ (30), ಮಲ್ಲಮ್ಮ (20) ಹಾಗೂ ನಾಗಪ್ಪ (35) ಎಂದು ಗುರುತಿಸಲಾಗಿದೆ. ಅವರಲ್ಲಿ ಮಲ್ಲಮ್ಮನ ಸ್ಥಿತಿ ಗಂಭೀರವಾಗಿದೆ.
ಘಟನಾ ಸ್ಥಳಕ್ಕೆ ಪಿಎಸ್ಐ ಶಿವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










