ಚಿಕ್ಕಮಗಳೂರಿನ ಹಿರಿಮೆಯನ್ನು ಹೆಚ್ಚಿಸಿದ ಸಿದ್ಧಾರ್ಥ ರವರ ಅಗಲಿಕೆ ನಮ್ಮ ಜಿಲ್ಲೆ ಹಾಗೂ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ : ಎಸ್.ಎಲ್. ಧರ್ಮೇಗೌಡ…

243
firstsuddi

ಚಿಕ್ಕಮಗಳೂರು :- ಚಿಕ್ಕಮಗಳೂರು, ಹಾಸನ,ಕೊಡಗು ಭಾಗದ ಪ್ರಮುಖ ಬೆಳೆಯಾದ ಕಾಫಿ ಉದ್ಯಮವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದು ಈ ಉದ್ಯಮದ ಮೂಲಕ 30 ಸಾವಿರಕ್ಕೂ ಹೆಚ್ಚು ಯುವಕರಿಗೆ ಉದ್ಯೋಗ ನೀಡಿ, ಕಾಫಿ ಡೇ ಸಂಸ್ಥೆ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆಗೆ ಹೆಚ್ಚು ನೆರವು ನೀಡಿ,ದೇಶ ವಿದೇಶಗಳಲ್ಲಿ ಚಿಕ್ಕಮಗಳೂರಿನ ಹಿರಿಮೆಯನ್ನು ಹೆಚ್ಚಿಸಿದ ಸಿದ್ಧಾರ್ಥ ರವರ ಅಗಲಿಕೆ ನಮ್ಮ ಜಿಲ್ಲೆ ಹಾಗೂ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ರವರು ತಿಳಿಸಿದ್ದಾರೆ.
ಅವರು ಪತ್ರಿಕಾ ಹೇಳಿಕೆ ನೀಡಿ ಸಿದ್ಧಾರ್ಥ ರವರ ಅಗಲಿಕೆಗೆ ತೀವ್ರ ಸಂತಾಪ ವ್ಯಕ್ತಪಡಿಸಿ, ಕತ್ತಲು ಆವರಿಸಿದ್ದ ಕಾಫಿ ಉದ್ಯಮಕ್ಕೆ ಹೊಸ ಆಯಾಮವನ್ನು ದೊರಕಿಸಿಕೊಟ್ಟ ಸಿದ್ಧಾರ್ಥ ರವರು ಉದ್ಯಮ ಕ್ಷೇತ್ರದ ಯಾವುದೇ ಸವಾಲನ್ನು ಸ್ವೀಕರಿಸಲು ಶಕ್ತಿವಂತರಾಗಿದ್ದರು. ಆದರೆ, ಆದಾಯ ತೆರಿಗೆ ಎಂಬ ಭೂತವನ್ನು ಮುಂದಿಟ್ಟು ಒಬ್ಬ ಯಶಸ್ವಿ ಉದ್ಯಮಿಯನ್ನು ಇಂದು ನಮ್ಮ ವ್ಯವಸ್ಥೆ ಬಲಿ ಪಡೆದಿದೆ ಎಂದು ಧರ್ಮೇಗೌಡರವರು ವಿಶ್ಲೇಷಿಸಿದ್ದಾರೆ. ಸುಮಾರು 30 ಸಾವಿರಕ್ಕೂ ಹೆಚ್ಚು ಜನರ ಕೈಗಳಿಗೆ ಕೆಲಸ ಕೊಟ್ಟು ಸಮಾಜದಲ್ಲಿ ಉತ್ತಮ ಜೀವನ ನಡೆಸಲು ನೆರವಾದ ಒಬ್ಬ ಸರಳ,ಕ್ರಿಯಾಶೀಲ ವ್ಯಕ್ತಿಯ ದಾರುಣ ಅಂತ್ಯ ಸಹಿಸಲಾರದ ನೋವನ್ನು ತಂದಿದೆ. ಉತ್ತಮವಾಗಿ ಉದ್ಯಮ ನಡೆಸುವವರಿಗೆ ಸರ್ಕಾರ ಹಾಗೂ ಇಲಾಖೆಗಳು ನೆರವಾಗ ಬೇಕೆ ವಿನಹ ಅವರಿಗೆ ಆಘಾತ ನೀಡ ಬಾರದು ಎಂದಿರುವ ಧರ್ಮೇಗೌಡ ರವರು, ಸಿದ್ಧಾರ್ಥ ರವರ ಅಗಲಿಕೆಯಿಂದ ಆಗಿರುವ ನಷ್ಟ ಭರಿಸಲು ಸಾಧ್ಯವಿಲ್ಲ ಎಂದು ತಿಳಿಸಿ,ದೇವರು ಅವರ ಆತ್ಮಕ್ಕೆ ಶಾಂತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.