ಚಿಕ್ಕಮಗಳೂರು:ದೇವೀರಮ್ಮನಿಗೂ ತಟ್ಟಿದ ಕ್ಯಾರ್ ಚಂಡಮಾರುತದ ಬಿಸಿ…

565

ಚಿಕ್ಕಮಗಳೂರು : ಕಾಫಿನಾಡಿನ ಐತಿಹಾಸ ಪ್ರಸಿದ್ಧ ದೇವಿರಮ್ಮನಿಗೂ ಕ್ಯಾರ್ ಚಂಡಮಾರುತದ ಎಫೆಕ್ಟ್ ತಟ್ಟಿದ್ದು, ದೇವರ ದರ್ಶನಕ್ಕೆ ಮಧ್ಯರಾತ್ರಿ ಬೆಟ್ಟ ಹತ್ತುವ ಭಕ್ತರಿಗೆ ಜಿಲ್ಲಾಡಳಿತ ನಿರ್ಭಂದ ಹೇರಿದೆ. ಶನಿವಾರ ಮಧ್ಯರಾತ್ರಿ ಬೆಟ್ಟ ಹತ್ತುವ ಬದಲು, ಭಾನುವಾರ ಬೆಳಗ್ಗಿನ ಜಾವ ಬೆಟ್ಟ ಹತ್ತುವಂತೆ ಸೂಚಿಸಿದೆ. ಜಿಲ್ಲಾದ್ಯಂತ ಭಾರೀ ಮಳೆಯಾಗ್ತಿದ್ದು ಗಿರಿಶಿಖರದ ಭಾಗದಲ್ಲಿ ಧಾರಾಕಾರ ಮಳೆಯಾಗ್ತಿರೋದ್ರಿಂದ ಭಕ್ತರ ಸುರಕ್ಷತೆ ದೃಷ್ಠಿಯಿಂದ ಭಾನುವಾರ ಹಗಲಲ್ಲಿ ಬೆಟ್ಟ ಹತ್ತುವಂತೆ ನಿರ್ದೇಶನ ನೀಡಿದೆ. ಸಾಲದಕ್ಕೆ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಬೆಟ್ಟಗುಡ್ಡಗಳ ಪರಿಶೀಲನೆ ನಡೆಸಿದ್ದು, ಕುಸಿಯುವ ಆತಂಕವನ್ನ ವ್ಯಕ್ತಪಡಿಸಿದ್ದಾರೆ. ಸಮುದ್ರಮಟ್ಟದಿಂದ ಸುಮಾರು 3000 ಅಡಿಗಳಷ್ಟು ಎತ್ತರದ ಬೆಟ್ಟದ ಮೇಲಿರೋ ದೇವೀರಮ್ಮನನ್ನ ನೋಡಲು ಕಿರಿದಾದ ಬೆಟ್ಟವನ್ನ ಹತ್ತಿಯೇ ಹೋಗಬೇಕು. ಜನಸಂದಣಿ ಹೆಚ್ಚಾಗಿ ಗುಡ್ಡದ ತೇವಾಂಶವೂ ಹೆಚ್ಚಿರೋದ್ರಿಂದ ವಿಜ್ಞಾನಿಗಳು ಕುಸಿಯುವ ಆತಂಕ ವ್ಯಕ್ತಪಡಿಸಿದ್ದಾರೆ. ಹಾಗಾಗಿ, ಜಿಲ್ಲಾಡಳಿತ ಮಧ್ಯರಾತ್ರಿ ಬೆಟ್ಟ ಹತ್ತುವವರಿಗೆ ಎಚ್ಚರಿಕೆ ನೀಡಿದೆ. ಪ್ರತಿವರ್ಷ ಲಕ್ಷಾಂತರ ಭಕ್ತರು ಬೆಟ್ಟ ಹತ್ತಿ ದೇವೀರಮ್ಮನ ದರ್ಶನ ಪಡೆಯುತ್ತಿದ್ರು, ಸಾವಿರಾರು ಭಕ್ತರು ಮಧ್ಯರಾತ್ರಿಯೇ ಬೆಟ್ಟ ಹತ್ತಿ ಬೆಳಗ್ಗಿನ ಜಾವದೊತ್ತಿಗೆ ಕೆಳಗೆ ಇಳಿಯುತ್ತಿದ್ರು. ಈ ವರ್ಷವೂ ಸುಮಾರು 60-70 ಸಾವಿರ ಭಕ್ತರು ಬೆಟ್ಟ ಹತ್ತೋ ನಿರೀಕ್ಷೆ ಇತ್ತು. ಆದ್ರೆ, ಸುರಿಯುತ್ತಿರೋ ಧಾರಾಕಾರ ಮಳೆಯಿಂದ ಜಿಲ್ಲಾಡಳಿತ ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಕೂಡ ಭಕ್ತರಿಗೆ ಮಧ್ಯ ರಾತ್ರಿ ಬೆಟ್ಟ ಹತ್ತುವುದು ಸೂಕ್ತವಲ್ಲ ಎಂದಿದೆ. ಅಷ್ಟೆ ಅಲ್ದೆ, ವೃದ್ಧರು, ಮಕ್ಕಳು, ಅನಾರೋಗ್ಯ ಪೀಡಿತರು ಹಾಗೂ ದೈಹಿಕ ಅಸಮರ್ಥರು ಬೆಟ್ಟ ಹತ್ತದಂತೆಯೂ ಸೂಚಿಸಿದೆ.